

ಹಾಸನ: ಜಿಲ್ಲೆಯ ಕೈಗಾರಿಕೆ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸುವಂತೆ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೈಗಾರಿಕೆ ಪ್ರದೇಶಕ್ಕೆ ನೀರು ಸರಬರಾಜು, ವಿದ್ಯುತ್ ಹಾಗೂ ಇನ್ನಿತರ ಮೂಲ ಸೌಕರ್ಯಗಳಲ್ಲಿ ಲೋಪ ಬಾರದಂತೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದ ಕೈಗಾರಿಕಾ ಉದ್ಯಮಿಗಳಿಗೆ ಮಂಜೂರಾಗಿರುವ ಸಾಲ ಬಿಡುಗಡೆ ಮಾಡಲು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ತಿಳಿಸಿದ್ದು, ಸಕಲೇಶಪುರದಲ್ಲಿರುವ ಕೆ.ಎಸ್.ಐ.ಡಿ.ಸಿ ಇಂಡಸ್ಟ್ರಿಯಲ್ ಎಸ್ಟೇಟ್ ಅನ್ನು ಗ್ರಾಮಪಂಚಾಯಿತಿಗೆ ವ್ಯಾಪ್ತಿಗೆ ನೀಡಲಾಗಿದೆ. ಶೀಘ್ರವೇ ಪುರಸಭಾ ವ್ಯಾಪ್ತಿಗೆ ನೀಡಬೇಕು. ಪಿಎಂಇಜಿಪಿ ಯೋಜನೆಯಡಿ ಉದ್ಯಮಿಗಳಿಗೆ ಸಾಲ ನೀಡಲು 140 ಗುರಿ ನಿಗದಿಪಡಿಸಲಾಗಿದ್ದು, 114 ಗುರಿ ಸಾಧಿಸಲಾಗಿದೆ. ಬಾಕಿ ಗುರಿ ಪೂರ್ಣಗೊಳಿಸಿ ಎಂದರು.
ಜಿಲ್ಲೆಯಲ್ಲಿರುವ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಮಾಡುವಂತೆ ಜಿಲ್ಲೆಯ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಎಚ್.ಎ. ಕಿರಣ್ ಹಾಗೂ ಮಾಜಿ ಅಧ್ಯಕ್ಷ ಜಿ.ಒ.ಮಹಾಂತಪ್ಪ ಮನವಿ ಸಲ್ಲಿಸಿದರು. ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಜು ಹಾಗೂ ಉಪನಿರ್ದೇಶಕ ರಾಜಶೇಖರ್, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕಿ ರೇವತಿ ಸುಧಾಕರ್, ಕೆಐಎಡಿಬಿ ಕಾರ್ಯಪಾಲಕ ಇಂಜಿನಿಯರ್ ಟಿ.ಎಸ್. ಲಕ್ಷ್ಮೀಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ರೀನಿವಾಸ್ ಜೋಶಿ ಇತರರು ಇದ್ದರು.