

ಹುಮನಾಬಾದ್: ಇಲ್ಲಿನ ಕೈಗಾರಿಕಾ ಪ್ರದೇಶದ ರಾಸಾಯನಿಕ ಕಾರ್ಖಾನೆಗಳಿಂದ ಸುತ್ತ್ತಲಿನ ಗ್ರಾಮಗಳಲ್ಲಿ ಉಂಟಾಗುತ್ತಿರುವ ಮಾಲಿನ್ಯ ತಡೆಗಟ್ಟಲು ಸಂಬಂಧಿತ ಅಧಿಕಾರಿಗಳು 15 ದಿವಸದೊಳಗೆ ಕಾನೂನುಬದ್ಧ ವ್ಯವಸ್ಥೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜನರೊಂದಿಗೆ ಖುದ್ದು ಹೋರಾಟಕ್ಕೆ ಇಳಿಯುವುದಾಗಿ ಶಾಸಕ ರಾಜಶೇಖರ ಪಾಟೀಲ್ ಎಚ್ಚರಿಕೆ ನೀಡಿದರು.
ಪಟ್ಟಣದ ಹೊರವಲಯದ ಕೈಗಾರಿಕಾ ಪ್ರದೇಶಕ್ಕೆ ಭಾನುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಕಾರ್ಖಾನೆಗಳಿಂದ ಹಳ್ಳಕ್ಕೆ ವಿಷಪೂರಿತ ರಾಸಾಯನಿಕ ತ್ಯಾಜ್ಯ ಹರಿಬಿಡುತ್ತಿರುವುದರ ಬಗ್ಗೆ ಪರಿಶೀಲನೆ ನಡೆಸಿದ ಅವರು, ಯಾವ ಕೈಗಾರಿಕೆಗಳಿಂದ ಮತ್ತು ಯಾವ ರೀತಿಯ ತ್ಯಾಜ್ಯ ಹಳ್ಳಕ್ಕೆ ಬರುತ್ತಿರುವ ಕುರಿತು ಸುತ್ತಲಿನ ಗ್ರಾಮಗಳ ಜನರಿಂದ ಮಾಹಿತಿ ಪಡೆದರು.
ಈ ಭಾಗದಲ್ಲಿ ಹೆಚ್ಚಿನ ಕೈಗಾರಿಕೆಗಳು ಪ್ರಾರಂಭವಾಗಿ ನಿರದ್ಯೋಗಿ ಯುವಕರಿಗೆ ಉದ್ಯೋಗ ಸಿಗಲಿದೆ ಎನ್ನುವುದು ನಮ್ಮ ಉದ್ದೇಶ. ಆದರೆ ಅವರು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂಥ ಕೆಲಸ ಮಾಡುತ್ತಿರುವುದನ್ನು ಸಹಿಸುವುದಿಲ್ಲ. ಸ್ಥಳೀಯ ಯುವಕರಿಗೆ ಕಾರ್ಖಾನೆಗಳಲ್ಲಿ ಶೇ.70ರಷ್ಟು ಉದ್ಯೋಗ ಮೀಸಲಾತಿ ಕೊಡಬೇಕಾಗಿದ್ದರೂ ಬೇರೆ ರಾಜ್ಯದವರನ್ನು ಸೇರಿಸಿಕೊಳ್ಳಲಾಗಿದೆ. ನಮ್ಮವರಿಗೆ ಕೇವಲ `ಡಿ' ಗ್ರೂಪ್ ಹುದ್ದೆಯಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಇದನ್ನು ಸಹ ಸರಿಪಡಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.
ಸತ್ಯದೀಪ್, ಆರ್ಕೆಎಂ, ಖಾಜ್, ಹೈದ್ರಾಬಾದ್ ಕೆಮಿಕಲ್, ಕ್ಷೇತ್ರೀಯ ಸೇರಿ ಎಲ್ಲ ಕೈಗಾರಿಕೆಯವರ ಜತೆ ಕೂಡಲೇ ಸಭೆ ಕರೆದು ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆ ಕುರಿತು ಚರ್ಚಿಸಿ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಸಿಪಿಐ ಮಲ್ಲಿಕಾರ್ಜುನ ಯಾತನೂರ, ಪಿಎಸ್ಐ ರವಿಕುಮಾರ ಹಾಗೂ ಇತರ ಅಧಿಕಾರಿಗಳಿಗೆ ಸೂಚಿಸಿದರು. ಬರುವ ಬುಧವಾರ ಎಲ್ಲ ಕೈಗಾರಿಕೋದ್ಯಮಿಗಳ ಜತೆಗೂ ಸಭೆ ನಡೆಸಿ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹರಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಮಾಣಿಕಪ್ರಭು ಸಂಸ್ಥಾನದ ಕಾರ್ಯದರ್ಶಿ ಶ್ರೀ ಆನಂದರಾಜ ಪ್ರಭು, ಚೇತನ್ರಾಜ ಪ್ರಭು, ಪ್ರಮುಖರಾದ ಲಕ್ಷ್ಮಣರಾವ ಬುಳ್ಳಾ, ಅಫ್ಸರ್ಮಿಯಾ, ರಾಜು ಇಟಗಿ, ಓಂಕಾರ ತುಂಬಾ, ಮಾಣಿಕ ಮೋಳಕೇರಾ, ಬಾಬು ಪಟಪಳ್ಳಿ, ನಿಜಾಮೋದ್ದಿನ್, ಪ್ರಭು ಕನಕಟಕರ್, ಲೋಕೇಶ ಮಾಣಿಕನಗರ, ತಾಪಂ ಇಒ ಮುರಗೆಪ್ಪ ವಸ್ತ್ರದ, ಕರೊನಾ ನೋಡಲ್ ಅಧಿಕಾರಿ ಡಾ.ಗೋವಿಂದ, ಪಿಡಿಒ ಹಣಮಂತರಾವ ಕಡಕೋಳ ಇತರರಿದ್ದರು.