

ಕೊಳ್ಳೇಗಾಲ: ವಿಷಮುಕ್ತ ಆಹಾರ ಒದಗಿಸಬೇಕೆಂಬ ಸದುದ್ದೇಶದೊಂದಿಗೆ ಸಾವಯವ ಕೃಷಿಯತ್ತ ಮುಖ ಮಾಡಿದ ರೈತರೊಬ್ಬರು ಪ್ರಾಯೋಗಿಕ ಪ್ರಯತ್ನದಲ್ಲೇ ಯಶಸ್ಸು ಕಾಣುವ ಮೂಲಕ ತೃಪ್ತಿಗೊಂಡಿದ್ದಾರೆ.
ತಾಲೂಕಿನ ತೇರಂಬಳ್ಳಿ ಗ್ರಾಮದ ರೈತ ಶಾಂತಮಲ್ಲು ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡಿದ್ದು ಕಳೆದ 5 ವರ್ಷಗಳಿಂದ ಸಾವಯವ ಕೃಷಿಯತ್ತ ಮುಖ ಮಾಡಿದ್ದಾರೆ. ತಮ್ಮ ಬಳಿಯಿರುವ ಎರಡೂವರೆ ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದು, ಸಣ್ಣ ರೈತರಾ ಗಿರುವ ಶಾಂತಮಲ್ಲು ಅವರಿಗೆ ಕೃಷಿ ಭೂಮಿಯೇ ಬದುಕಿನ ಆಧಾರವಾಗಿದೆ.
ಎರಡೂವರೆ ಎಕರೆ ಪೈಕಿ ಮುಕ್ಕಾಲು ಎಕರೆಯಲ್ಲಿ ಸಾವಯವ ಕೃಷಿ ಪದ್ಧತಿಯಡಿ ನಾಡ ತಳಿಗೆ ಸೇರಿದ ರಾಜಮುಡಿ ಭತ್ತ ಬೆಳೆದಿದ್ದಾರೆ. ಉಳಿದ ಜಮೀನನಲ್ಲಿ ನೆಪೀಯರ್ ಮೇವಿನ ಕಡ್ಡಿ ಹಾಗೂ ಮಿನಿ ಲಾಂಗ್ ಭತ್ತ ಹಾಕಿದ್ದಾರೆ. 15 ತೆಂಗಿನ ಸಸಿ, ಸೀಬೆ ಮರಗಳಿದ್ದು, ಹಂತ ಹಂತವಾಗಿ ಪೂರ್ಣ ಪ್ರಮಾಣದಲ್ಲಿ ಸಾವಯವ ಕೃಷಿಕರಾಗಲು ದಿಟ್ಟ ತೀರ್ಮಾನ ಮಾಡಿದ್ದಾರೆ. ಸಣ್ಣ ರೈತರು ಅಧಿಕ ಇಳುವರಿ ಹಾಗೂ ವ್ಯಾಪಾರ ದೃಷ್ಟಿಯಿಂದ ರಾಸಾಯನಿಕ ಕೃಷಿ ಕಡೆಗೆ ಮುಖ ಮಾಡುವುದು ಪ್ರಸ್ತುತ ದಿನ ಮಾನದಲ್ಲಿ ಸಾಮಾನ್ಯ. ಆದರೆ ಶಾಂತಮಲ್ಲು ಅವರು ಇದಕ್ಕೆ ತದ್ವಿರುದ್ಧ. ಸಾವಯವ ಕೃಷಿ ಭೂಮಿಯ ಫಲವತ್ತತೆ ಹೆಚ್ಚಿಸುವುದರ ಜತೆಗೆ ಮುಂದಿನ ಪೀಳಿಗೆಗೆ ವಿಷಮುಕ್ತ ಆಹಾರ ನೀಡುವ ಸಾಧನ ಎಂಬುದನ್ನು ಅರಿತು ಸಾವಯವ ಕೃಷಿ ಪದ್ಧತಿ ಕಡೆಗೆ ವಾಲಿದ್ದಾರೆ.
ದನಕರುಗಳೇ ಮೂಲ:
ಸಾವಯವ ಕೃಷಿ ಬಡ ರೈತರಿಗಲ್ಲ. ಬದಲಾಗಿ ಅದು ಶ್ರೀಮಂತ ರೈತರಿಗೆ ಎಂಬ ಮಾತು ಹೇಳಲಾಗುತ್ತದೆ. ಆದರೆ ಶಾಂತಮಲ್ಲು ಇದನ್ನು ಸುಳ್ಳಾಗಿಸಿದ್ದಾರೆ. ಬಡ ವರ್ಗಕ್ಕೆ ಸೇರಿದ ಸಣ್ಣ ರೈತರೂ ಸಾವಯವ ಕೃಷಿ ಮಾಡಬಹುದೆಂಬುದನ್ನು ಇವರು ತೋರಿಸಿಕೊಡುವ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ದನ-ಕರುಗಳನ್ನು ಸಾಕುತ್ತಿರುವ ಶಾಂತಮಲ್ಲು, ಅದರಿಂದ ಸಿಗುವ ಗಂಜಲ ಹಾಗೂ ಸಗಣಿಯನ್ನು ಸಾವಯವ ಕೃಷಿಗೆ ಗೊಬ್ಬರವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜೀವಾಮೃತ ಹಾಗೂ ದ್ವಿದಳ ದಾನ್ಯ ಹಾಕಿ 15 ದಿನಗಳು ಮಿಶ್ರಣ ಮಾಡಿಟ್ಟ ಗೋಕೃಪಾಮೃತವನ್ನು ಬೆಳೆಗೆ ನೀಡುತ್ತಿದ್ದಾರೆ. ಇದರಿಂದ ಉತ್ತಮ ಇಳುವರಿ ಸಿಗುವುದಲ್ಲದೆ ಭೂಮಿಯ ಫಲವತ್ತತೆಗೆ ಸಹಕಾರಿಯಾಗಿದೆ.
ಬಿತ್ತನೆ ಬೀಜಕ್ಕೆ ಬೇಡಿಕೆ ಸಂಪೂರ್ಣ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ರಾಜಮುಡಿ ತಳಿಯ ಬಿತ್ತನೆ ಭತ್ತ ಇವರ ಬಳಿ ಲಭ್ಯವಿದ್ದು, ಈ ಬೀಜಕ್ಕೆ ರೈತರಿಂದ ಬೇಡಿಕೆ ಇದೆ. ಅವಶ್ಯಕತೆಗೆ ತಕ್ಕಂತೆ ಸಾವಯವ ಕೃಷಿ ಮಾಡುವ ರೈತರಿಗೆ ಬಿತ್ತನೆ ಭತ್ತವನ್ನು ಮಾರಾಟ ಮಾಡುತ್ತಿದ್ದಾರೆ. 1 ಕೆಜಿಗೆ 100 ರೂ.ನಂತೆ ನೀಡಲಾಗುತ್ತಿದೆ. ಶಾಂತಮಲ್ಲು ಎರಡೂವರೆ ಎಕರೆಯಲ್ಲಿ ಭತ್ತ, ರಾಗಿ ಹಾಗೂ ಕಬ್ಬು ಬೆಳೆಯುತ್ತ ಬೆಳೆಯುತ್ತಿದ್ದರು. ಮುಕ್ಕಾಲು ಎಕರೆಯಲ್ಲಿ ಸಾವಯವ ಕೃಷಿಯನ್ನು ಅಳವಡಿಸಿಕೊಂಡ ಬಳಿಕ ಕ್ರಿಮಿನಾಶಕ, ರೋಗ ನಿರೋಧಕ, ರಾಸಾಯನಿಕ ಗೊಬ್ಬರಕ್ಕೆ ಗುಡ್ ಬೈ ಹೇಳಿದ್ದಾರೆ. ಇದರ ಪರಿಣಾಮ ಬೆಳೆಗಳು ನಳನಳಿಸುತಿದ್ದು, ಎಲ್ಲರನ್ನೂ ಹುಬ್ಬೇರುವಂತೆ ಮಾಡಿದೆ. ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಉತ್ತೇಜನ ನೀಡಲು ಕೊಳ್ಳೇಗಾಲದಲ್ಲಿ ಆರಂಭಗೊಂಡಿರುವ ಸ್ವಾಭಿಮಾನಿ ಸಾವಯವ ರೈತ ಬಳಗ ಸದಸ್ಯರು ಪರಿಣಾಮಕಾರಿಯಾಗಿ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಶಾಂತಮಲ್ಲು ಸಹ ಬಳಗದ ಸದಸ್ಯರಾಗಿದ್ದು, ಸಾವಯವ ಕೃಷಿ ಮೇಲೆ ಆಸಕ್ತಿವುಳ್ಳವರಿಗೆ ಬಿತ್ತನೆ ಬೀಜಗಳನ್ನು ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿದ್ದಾರೆ.
ಕೃಷಿ ಜತೆಗೆ ಹೈನುಗಾರಿಕೆ ಸಾವಯವ ಕೃಷಿ ಜತೆಗೆ ಹೈನುಗಾರಿಕೆ ಶಾಂತಮಲ್ಲು ಅವರ ಕೈ ಹಿಡಿದಿದೆ. 4 ಹಸುಗಳು, 3 ಕರುಗಳನ್ನು ಸಾಕುತ್ತಿದ್ದಾರೆ. ಜಮೀನಿನಲ್ಲಿ ಸುಸಜ್ಜಿತ ಕೊಟ್ಟಿಗೆ ನಿರ್ಮಾಣ ಮಾಡಿ ಹಸುಗಳನ್ನು ಸಾಕಲಾಗುತ್ತಿದೆ. ಹಸುವಿನ ಹಾಲನ್ನು ಮಾರಾಟ ಮಡುವ ಮೂಲಕ ತಿಂಗಳಿಗೆ ಸಾವಿರಾರು ರೂ. ಸಂಪಾದನೆ ಆಗುತ್ತಿದೆ. ಇದು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಿದೆ. ಕೊಟ್ಟಿಗೆ ತೊಳೆದ ಸಗಣಿ ಹಾಗೂ ಗಂಜಲ ಮಿಶ್ರಿತ ನೀರನ್ನು ನೆಪೀಯರ್ ಮೇವಿನ ಸಸಿಗೆ ಸಿಂಪಡಿಸಲಾಗುತ್ತಿದ್ದು, ಇದರಿಂದ ಫಸಲು ಉತ್ತಮವಾಗಿ ಬರುತ್ತಿದೆ. ಆರೋಗ್ಯಕರ ಭೂಮಿ ಹಾಗೂ ಆರೋಗ್ಯಕರ ಆಹಾರವನ್ನು ಮುಂದಿನ ಪೀಳಿಗೆಗೆ ನೀಡಲು ಪ್ರಸ್ತುತ ಸಂದರ್ಭದಲ್ಲಿ ಸಾವಯವ ಕೃಷಿ ಅತ್ಯವಶ್ಯಕ. ಪ್ರಾಯೋಗಿಕವಾಗಿ ಸಾವಯವ ಕೃಷಿ ಆರಂಭಿಸಿದೆ. ಆದರೆ ಇದೀಗ ಪೂರ್ತಿಯಾಗಿ ಕೃಷಿಯನ್ನು ಸಾವಯವವಾಗಿ ಬದಲಾಯಿಸುತ್ತಿದ್ದೇನೆ. ಅಲ್ಲದೆ ಹೈನುಗಾರಿಕೆಯೂ ಸಾವಯವ ಕೃಷಿಗೆ ಸಹಕಾರಿಯಾಗಿದ್ದು, ಹೆಚ್ಚು ಅನುಕೂಲವಾಗಿದೆ. ಶಾಂತಮಲ್ಲು ಸಾವಯವ ಕೃಷಿಕ, ತೇರಂಬಳ್ಳಿ ಗ್ರಾಮ