ಕೈ ಹಿಡಿದ ಬಿಜೆಪಿ ಪುರಸಭೆ ಸದಸ್ಯರು ?

ydg10
Published on

ಕೆಂಭಾವಿ: ಪಟ್ಟಣದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಕೇವಲ ಎರಡು ದಿನ ಬಾಕಿ ಇರುವಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಮಹಾ ತಿರುವು ಪಡೆದಿದ್ದು ಬಹುಮತ ಇಲ್ಲದಿದ್ದರೂ ಕೈ ಪಡೆ ಅಧ್ಯಕ್ಷ-ಉಪಾಧ್ಯಕ್ಷ ಗಾದಿಗೇರುವುದು ಬಹುತೇಕ ಖಚಿತ ಎನ್ನಲಾಗಿದೆ.

ಇದಕ್ಕೆ ಪುಷ್ಠಿ ನೀಡುವಂಥ ಘಟನೆಯೊಂದು ನಡೆದಿದ್ದು, ಬಿಜೆಪಿಯ ಮೂವರಿಂದ ಐದು ಸದಸ್ಯರು ಕಳೆದ ಮರ‍್ನಾಲ್ಕು ದಿನಗಳಿಂದ ಪಕ್ಷದ ಮುಖಂಡರ ಸಂಪರ್ಕಕ್ಕೆ ಸಿಗದೆ ಇರುವುದು ಈ ಮಹಾ ತಿರುವಿಗೆ ಕಾರಣ ಎನ್ನಲಾಗಿದೆ. ಬಲ್ಲ ಮೂಲಗಳ ಪ್ರಕಾರ ಆಪರೇಶನ್ ಹಸ್ತಕ್ಕೆ ಬಿಜೆಪಿ ಸದಸ್ಯರು ಸಿಲುಕಿದ್ದಾರೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.

ತಮ್ಮ ಪಕ್ಷದ ಸದಸ್ಯರು ಹೈಜಾಕ್ ಆದ ಸುದ್ದಿ ಅರಿಯುತ್ತಲೇ ಶನಿವಾರ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಪಾಟೀಲ್ ಯಾಳಗಿ ನೇತೃತ್ವದ ನೂರಾರು ಕರ‍್ಯಕರ್ತರು ಪಕ್ಷದ ಸದಸ್ಯರ ಮನೆಗೆ ಭೇಟಿ ನೀಡಿ ವಿಚಾರಿಸಿದರು. ಆದರೆ ಅವರು ಮನೆಯಲ್ಲದ ಕಾರಣ ಪಕ್ಷದ ವಿಪ್ ಆದೇಶದ ಪ್ರತಿ ಸದಸ್ಯರ ಮನೆಗಳಿಗೆ ಅಂಟಿಸಿದರು.

ಈ ವೇಳೆ ಮಾತನಾಡಿದ ಅವರು, ಕಾರ್ಯಕರ್ತರೇ ಬಿಜೆಪಿ ಪಕ್ಷದ ಜೀವಾಳ. ಅಂತಹ ಕಾರ್ಯಕರ್ತರು ಹಗಲಿರುಳು ಶ್ರಮಿಸಿ ನಿಮ್ಮನ್ನು ಪುರಸಭೆಗೆ ಆಯ್ಕೆ ಮಾಡಿದ್ದಾರೆ. ಅಂತಹ ನಿಷ್ಠಾವಂತ ಕರ‍್ಯಕರ್ತರಿಗೆ ಅನ್ಯಾಯ ಮಾಡಬೇಡಿ ಎಂದು ಮನವಿ ಮಾಡಿದರು.

ಬಿಜೆಪಿಯಿಂದ ಆಯ್ಕೆಯಾದ ಕೆಲ ಪುರಸಭೆ ಸದಸ್ಯರು ಶುಕ್ರವಾರದಿಂದ ಪಕ್ಷದ ಮುಖಂಡರ ಸಂಪರ್ಕಕ್ಕೆ ಸಿಗದ ಕಾರಣ ಕಾರ್ಯಕರ್ತರಿಗೆ ದಿಗ್ಭö್ರಮೆಯಾಗಿದೆ. ಸುಮಾರು ಎರಡು ವರ್ಷಗಳ ಹಿಂದೆ ನಡೆದ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕರ‍್ಯಕರ್ತರು ಹಗಲಿರುಳು ಶ್ರಮಿಸಿ ಸದಸ್ಯರ ಆಯ್ಕೆಗೆ ಕೆಲಸ ಮಾಡಿದ್ದಾರೆ. ಎಲ್ಲ ಕಾರ್ಯಕರ್ತರ ಹಾಗೂ ಮುಖಂಡರ ಅವಿರತ ಶ್ರಮದಿಂದ ಮೊದಲ ಬಾರಿಗೆ ಕೆಂಭಾವಿ ಪಟ್ಟಣದಲ್ಲಿ ಬಿಜೆಪಿ ಪಕ್ಷ ಬಹುಮತ ಗಳಿಸಿದೆ. ಆದರೆ ಕೆಲ ಸದಸ್ಯರು ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಯಾವ ಸದಸ್ಯರು ಕೂಡ ಕರ‍್ಯಕರ್ತರ ಶ್ರವನ್ನು ವ್ಯರ್ಥ ಮಾಡದೆ, ಪಕ್ಷದ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಮಾಡುವುದಕ್ಕೆ ಸಹಕರಿಸಬೇಕು ಎಂದು ಹೇಳಿದರು.

ಈ ವೇಳೆ ಸಂಗಣ್ಣ ತುಂಬಗಿ, ರಮೇಶ ಸೊನ್ನದ, ಡಾ.ರವಿ ಅಂಗಡಿ, ನಿಂಗಪ್ಪ ಹಲಗಿ, ರವಿ ಮಿರ್ಜಿ, ಮಲ್ಕಪ್ಪ ಶಹಾಪುರ, ದೇವು ಯಾಳಗಿ, ಮಂಜು ದೋರನಹಳ್ಳಿ, ಚಾಂದಪಾಶಾ, ಶಿವು ಸಾಸನೂರ, ಹಳ್ಳೆಪ್ಪ ಕವಲ್ದಾರ, ಕೃಷ್ಣ ಪರಸನಹಳ್ಳಿ, ಮಲ್ಲು ವಠಾರ, ಸಂತೋಷ, ದಯಾನಂದ ಪತ್ತೇಪುರ, ಹಂಪಣ್ಣ, ಉಮೇಶರೆಡ್ಡಿ, ಭೀಮನಗೌಡ, ಹಣಮಂತ, ಮಲ್ಕಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net