

ಹಲಗೂರು: ಫೆಂಗಲ್ ಚಂಡಮಾರುತ ಅಬ್ಬರದಿಂದ ಜಿಲ್ಲಾದ್ಯಂತ ಸುರಿಯುತ್ತಿರುವ ಮಳೆಯಿಂದ ರೈತರು ಬೆಳೆದ ಫಸಲು ಕೈ ಸೇರುವ ಮೊದಲೇ ನಷ್ಟವಾಗುತ್ತಿದೆಯಲ್ಲದೆ, ಪಟ್ಟಣ ಪ್ರದೇಶಕ್ಕೆ ವ್ಯಾಪಾರ-ವಹಿವಾಟಿಗೆ ಬರಬೇಕಾದ ಗ್ರಾಮೀಣ ಜನತೆ ಮಳೆಯಿಂದ ಗ್ರಾಮದಿಂದ ಹೊರಬಾರದೆ ಇದ್ದುದ್ದರಿಂದ ವ್ಯಾಪಾರಸ್ಥರಿಗೂ ವ್ಯಾಪಾರ ಇಲ್ಲದಂತಾಗಿದೆ. ಪ್ರತಿದಿನ ಗಿಜಿ ಗಿಜಿ ಎನ್ನುತ್ತಿದ್ದ ಹಲಗೂರು ಸೋಮವಾರ ಬಿಕೋ ಎನ್ನುತ್ತಿತ್ತು. ಹಲಗೂರಿನ ದಿನಸಿ ಅಂಗಡಿಗಳು, ಬಟ್ಟೆ ಅಂಗಡಿಗಳು, ಹೋಟೆಲ್‌ಗಳು, ತರಕಾರಿ, ಹಣ್ಣಿನ ಹಾಗೂ ಟೀ ಅಂಗಡಿಯ ಮಾಲೀಕರು ವ್ಯಾಪಾರವಿಲ್ಲದೆ ಕುಳಿತಿದ್ದರು. ಕೆಲವರು ಅಂಗಡಿ ಮುಚ್ಚಿ ಮನೆಗೆ ಸೇರಿದ್ದರು, ಸಾರ್ವಜನಿಕರ ಓಡಾಟವೂ ವಿರಳವಾಗಿತ್ತು.
ನನ್ನ ಹಣ್ಣಿನ ಅಂಗಡಿ ಬಾಗಿಲು ಮುಚ್ಚಿ ಮನೆಗೆ ಹೋದರೆ ಹಣ್ಣುಗಳು ಕೊಳೆತು ಹೋಗುತ್ತವೆ. ವಿಧಿ ಇಲ್ಲದೆ ಬಾಗಿಲು ತೆರೆದು ಕುಳಿತಿದ್ದೇನೆ. ಬೆಳಗ್ಗೆಯಿಂದ ಯಾವುದೇ ವ್ಯಾಪಾರ ಇಲ್ಲ ರೈತರು ಹಳ್ಳಿಗಳಿಂದ ಬಂದರೆ ಮಾತ್ರ ವ್ಯಾಪಾರ ನಡೆಯುತ್ತದೆ. ಮಳೆಯ ಕಾರಣ ಮನೆಯಿಂದ ಹೊರಗೆ ಬರುತ್ತಿಲ್ಲ. ಕೃಷ್ಣ, ಹಣ್ಣಿನ ಅಂಗಡಿ ಮಾಲೀಕ, ಚನ್ನಪಟ್ಟಣ ರಸ್ತೆ, ಹಲಗೂರು ಫಸಲು ಕಟಾವಿಗೆ ಬಂದಿದೆ, ಹೊಲ ಗದ್ದೆಗಳಲ್ಲಿ ಬೆಳೆದ ಫಸಲನ್ನು ಕೊಯ್ಲು ಮಾಡಿ ಹಾಕಲಾಗಿದ್ದು, ಮಳೆಯ ಕಾರಣ ಭತ್ತ ಪೂರ್ತಿ ನೆನೆದು ಹೋಗಿದೆ. ಇದರಿಂದ ನಮಗೆ ಫಸಲು ಕೈ ಸೇರುವ ಮೊದಲೇ ನಷ್ಟಕ್ಕೆ ಒಳಗಾಗುತ್ತಿದ್ದೇವೆ. ನಾಗೇಶ್, ರೈತ, ಪುರದೊಡ್ಡಿ ಗ್ರಾಮ