ಕೈ ಸರ್ಕಾರದ ವಿರುದ್ಧ ಕಾರಜೋಳ ಆಕ್ರೋಶ

ctd0000
Published on

ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಬೆಳಕಿಗೆ ಬರುತ್ತಿರುವ ವಿವಿಧ ಹಗರಣಗಳಲ್ಲಿ ಹಲವು ಮಂತ್ರಿಗಳು, ಸಿಎಂ ವಿರುದ್ಧ ಗುರುತರ ಆರೋಪಗಳಿದ್ದರೂ ರಾಜೀನಾಮೆ ಕೊಡದೆ ಅಧಿಕಾರಕ್ಕೆ ಅಂಟಿಕೊಂಡು ಕುಳಿತಿದ್ದಾರೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ಆರೋಪಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಾಯುಕ್ತ ಅಧಿಕಾರಿಗಳ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಕೆಲವು ಮಂತ್ರಿಗಳ ಹೆಸರು ಕೇಳಿ ಬರುತ್ತಿದೆ. ನಾನಾ ಹಗರಣಗಳಂತೆ ಇದನ್ನೂ ಈ ಸರ್ಕಾರ ಮುಚ್ಚಿ ಹಾಕಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸ್ವಾತಂತ್ರಾೃನಂತರದಲ್ಲಿ ಇಂಥ ಕೆಟ್ಟ, ಭಂಡತನ, ಲಜ್ಜೆಗೇಡಿ ಸರ್ಕಾರವನ್ನು ನಾನೆಂದೂ ನೋಡಿಲ್ಲವೆಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ ಅವರು, ಬೆಂಗಳೂರು ಕಾಲ್ತುಳಿತ ಪ್ರಕರಣದಲ್ಲಿ ರಾಜೀನಾಮೆ ನೀಡದೆ, ವಿಧಾನಸೌಧ, ಚಿನ್ನಸ್ವಾಮಿ ಕ್ರೀಡಾಂಗಣ ಎಂದೆಲ್ಲ ಈ ಸರ್ಕಾರ ಮಾತನಾಡಿದೆ. ಚಿನ್ನಸ್ವಾಮಿ ಕ್ರೀಡಾಂಗಣ ಏನು ಪಾಕಿಸ್ತಾನದಲ್ಲಿದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.

ಗ್ಯಾರಂಟಿ ಸರ್ಕಾರವೆಂದು ಜಾಹೀರಾತು ಕೊಡುವ ಕಾಂಗ್ರೆಸ್‌ನ ಆಡಳಿತಾವಧಿಯಲ್ಲಿ ಅಧಿಕಾರಿಗಳು, ರೈತರು, ಗುತ್ತಿಗೆದಾರರ ಆತ್ಮ ಹತ್ಯೆ ಗ್ಯಾರಂಟಿಯಾಗಿದೆ. ವರ್ಗಾವಣೆ ದಂಧೆ ಸಹಿತ ಭ್ರಷ್ಟಾಚರದಲ್ಲಿ ಮುಳುಗಿರುವ ಸರ್ಕಾರ ದಲಿತರ ಅನುದಾನವನ್ನೂ ಬಿಟ್ಟಿಲ್ಲ ಎಂದು 187 ಕೋಟಿ ರೂ. ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ನೆನಪಿಸಿದರು.

ಕಾಂಗ್ರೆಸ್ಸಿನ 40 ಶಾಸಕರೇ ತಮ್ಮ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದ ಅವರು, ಮರಳು ಲೂಟಿ, ಜೂಜಾಟ ಎಗ್ಗಿಲ್ಲದೆ ನಡೆಯುತಿದೆ ಎಂದರು.

ಯೋಜನೆ ಮತ್ತು ಯೋಜನೇತರ ವೆಚ್ಚದ ಕುರಿತು ಶ್ವೇತಪತ್ರ ಹೊರಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.

ಕಾಲ್ತುಳಿತರ ಪ್ರಕರಣದಲ್ಲಿ ಸಿಎಂ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡದೆ, ವಿಮಾನ ದುರಂತವನ್ನು ಹೋಲಿಕೆ ಮಾಡುತ್ತಿರುವುದು ದುರದೃಷ್ಟಕರ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net