ಕೈ ಶುಚಿಯಾಗಿಸಿ, ಮಾಸ್ಕ್ ಧರಿಸಿ ಹಕ್ಕು ಚಲಾಯಿಸಿ

Gramayana Logo
Published on

ಧಾರವಾಡ: ಡಿ. 22 ಮತ್ತು 27ರಂದು ಜರುಗುವ 136 ಗ್ರಾ.ಪಂ.ಗಳ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿ ಮತದಾರ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೋವಿಡ್ ಆರೋಗ್ಯ ಸುರಕ್ಷತೆ ಕ್ರಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಕೊಠಡಿ ಪ್ರವೇಶಕ್ಕೂ ಮೊದಲು ಕೈಗಳನ್ನು ಸ್ಯಾನಿಟೈಸರ್ ಮೂಲಕ ಶುಚಿಗೊಳಿಸಿಕೊಳ್ಳಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳುಬೇಕು. ನಾಮಪತ್ರ ಸ್ವೀಕರಿಸುವ ಅಧಿಕಾರಿಗಳು ಕೈಗಳಿಗೆ ಸ್ಯಾನಿಟೈಸರ್, ಮಾಸ್ಕ್ ಧಾರಣೆ, ಕೈಗಳಿಗೆ ಗ್ಲೌಸ್​ಗಳನ್ನು ಕಡ್ಡಾಯವಾಗಿ ಧರಿಸಬೇಕು. ಅಭ್ಯರ್ಥಿ ಅಥವಾ ಅವರ ಒಬ್ಬ ಸೂಚಕ ಮಾತ್ರ ಪ್ರವೇಶಿಸಲು ಅವಕಾಶವಿದೆ. ನಾಮಪತ್ರ ಪರಿಶೀಲನೆ ಹಾಗೂ ವಾಪಸ್ ಪಡೆಯುವ ವೇಳೆ ಸುರಕ್ಷತೆ ಕ್ರಮ ಪಾಲಿಸಬೇಕು.

ಅಭ್ಯರ್ಥಿಗಳು ಗರಿಷ್ಠ 5 ಜನ ಬೆಂಬಲಿಗರೊಂದಿಗೆ ಅಂತರ ಕಾಯ್ದುಕೊಂಡು ಮನೆಮನೆಗೆ ತೆರಳಿ ಪ್ರಚಾರ ಮಾಡಬಹುದು.

ಕೋವಿಡ್ ಹಿನ್ನೆಲೆಯಲ್ಲಿ ಗರಿಷ್ಠ 1,000 ಮತದಾರರಿಗೆ ಒಂದರಂತೆ ಮತಗಟ್ಟೆ ಸ್ಥಾಪಿಸಲಾಗಿದೆ. ಮತದಾನದಂದು ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು. ಮತದಾನ ಕೊಠಡಿಗೆ ಪ್ರವೇಶಿಸುವ ವ್ಯಕ್ತಿಗಳನ್ನು ಥರ್ಮಲ್ ಸ್ಕ್ರೀನಿಂಗ್​ನಿಂದ ಜ್ವರ ತಪಾಸಣೆ ಮಾಡಲಾಗುವುದು. ಒಳಪ್ರವೇಶಿಸುವ ವ್ಯಕ್ತಿಗಳು ಮಾಸ್ಕ್ ಧರಿಸಿರುವುದನ್ನು ಖಚಿತ ಪಡಿಸಿಕೊಳ್ಳಲಾಗುವುದು.

ಪ್ರತಿ ಮತಗಟ್ಟೆಗಳಿಗೆ ಆಶಾ, ಕಿರಿಯ ಆರೋಗ್ಯ ಸಹಾಯಕರು, ಆರೋಗ್ಯ ಸಿಬ್ಬಂದಿಯನ್ನು ನೇಮಿಸಲಾಗುತ್ತದೆ. ಮತದಾನಕ್ಕೆ ಆಗಮಿಸುವ ಕೋವಿಡ್ ಸೋಂಕಿತರು ಹಾಗೂ ಶಂಕಿತರ ತುರ್ತು ಚಿಕಿತ್ಸೆಗಾಗಿ ಮತದಾನ ಕೇಂದ್ರದ ಹತ್ತಿರ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಆರೋಗ್ಯ ತಂಡ ರಚಿಸಲಾಗಿದ್ದು, 36 ಆಂಬುಲೆನ್ಸ್​ಗಳು ಮತ್ತು ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಸುಮಾರು 36 ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆ, ಆರೈಕೆಗಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಕೋವಿಡ್ ಪಾಸಿಟಿವ್ ಇರುವ ವ್ಯಕ್ತಿ ನಾಮಪತ್ರ ಸಲ್ಲಿಸಲು ಇಚ್ಛಿಸಿದರೆ, ಸೂಚಕರ ಮೂಲಕ ಸಲ್ಲಿಸಬೇಕು. ಅಭ್ಯರ್ಥಿಗಳು ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಮಾತ್ರ ಪ್ರಚಾರ ಮಾಡಬಹುದು. ಕೋವಿಡ್ ಪಾಜಿಟಿವ್ ಇರುವ ಮತದಾರರಿಗೆ ಮತದಾನ ಅವಧಿಯ ಕೊನೆಯ ಒಂದು ಗಂಟೆ ಮೀಸಲಿರಿಸಲಾಗಿದೆ. ಅವರಿಗೆ ಎಲ್ಲ ಆರೋಗ್ಯ ಸುರಕ್ಷತೆ ಕ್ರಮ ಅನುಸರಿಸಿ ಮತದಾನಕ್ಕೆ ಅವಕಾಶ ನೀಡಲಾಗುವುದು.| ನಿತೇಶ ಪಾಟೀಲ, ಜಿಲ್ಲಾಧಿಕಾರಿ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net