

ತುಮಕೂರು: ವಿಧಾನಸಭಾ ಚುನಾವಣೆ ಸಿದ್ಧತೆಗಾಗಿ ಕಾಂಗ್ರೆಸ್ ಆರಂಭಿಸಿರುವ ನವಸಂಕಲ್ಪ ಚಿಂತನಾ ಶಿಬಿರ ಕಾಯಕರ್ತರಲ್ಲಿ ಉತ್ಸಾಹ ಮೂಡಿಸುವಲ್ಲಿ ವಿಫಲವಾಗಿದೆ.
ಕೆಪಿಸಿಸಿ ಉಪಾಧ್ಯಕ್ಷ ಕೆ.ಎನ್.ರಾಜಣ್ಣ ಹಾಗೂ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ನಡುವಿನ ಮುಸುಕಿನ ಗುದ್ದಾಟ ಶಿಬಿರದಲ್ಲಿ ಬಹಿರಂಗವಾಗಿದ್ದು, ಜಿಲ್ಲೆಯ ಎಲ್ಲ ಹಿರಿಯ ಮುಖಂಡರ ನಡುವೆ ಸಂಬಂಧ ಹಳಸಿದೆ ಎಂಬ ಸಂದೇಶವನ್ನೇ ಸಾರಿದೆ. ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಕೂಡ ವೇದಿಕೆಯಲ್ಲಿ ಮಾತನಾಡುವಾಗ ನನ್ನ ಸೋಲಿಸಲು ಶ್ರಮಿಸಿದವರಿಗೆ ಕೆಪಿಸಿಸಿ ಮಣೆ ಹಾಕಿ ಪಕ್ಷದಲ್ಲಿ ಹೊಣೆ ನೀಡಿರುವುದು ಸರಿಯಲ್ಲ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿರುವುದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸತ್ಯ ತಿಳಿಸಿದೆ.
ಜಿಲ್ಲಾ ಕಾಂಗ್ರೆಸ್ನಲ್ಲಿನ ಗುದ್ದಾಟ ಮೇಲ್ನೋಟಕ್ಕೆ ಕೆ.ಎನ್.ರಾಜಣ್ಣ ಹಾಗೂ ಆರ್.ರಾಮಕೃಷ್ಣ ನಡುವೆ ಎನಿಸಿದರೂ ಆರ್.ರಾಮಕೃಷ್ಣ ಅವರ ಹಿಂದೆ ಡಾ.ಜಿ.ಪರಮೇಶ್ವರ ಇದ್ದಾರೆ ಎಂಬುದು ಜಿಲ್ಲೆಯಲ್ಲಿ ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ. ಹಾಗಾಗಿ, ಜಿಲ್ಲೆಯ ಇಬ್ಬರು ಪ್ರಭಾವಿ ಮುಖಂಡರೇ ಜಿದ್ದಾಜಿದ್ದಿಗೆ ಬಿದ್ದಿರುವುದು ಭವಿಷ್ಯದಲ್ಲಿ ಚುನಾವಣೆ ಎದುರಿಸುವವರ ವಿಶ್ವಾಸವನ್ನೇ ಕಸಿದಿದೆ.
ಮಾಜಿ ಶಾಸಕ ಎಂ.ಆರ್.ಸೀತಾರಾಂ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಎಂ.ಡಿ.ಲಕ್ಷಿ$್ಮನಾರಾಯಣ ಕೂಡ ಕಾಂಗ್ರೆಸ್ ತೊರೆಯುವ ಚಿಂತನೆಯಲ್ಲಿದ್ದು ಬಿಜೆಪಿ ರಾಜ್ಯಾಧ್ಯಕ್ಷರ ಜತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಒಕ್ಕಲಿಗ ಸಮುದಾಯದ ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್ ತೊರೆಯುವುದು ಖಚಿತವಾಗಿರುವ ನಡುವೆಯೇ ನೇಕಾರ ಸಮುದಾಯದ ಎಂ.ಡಿ.ಲಕ್ಷಿ$್ಮನಾರಾಯಣ ಕೂಡ ಪಕ್ಷ ಬಿಡುತ್ತಾರೆ ಎಂಬ ವಿಷಯ ಭವಿಷ್ಯದಲ್ಲಿ ನಿಜವಾದರೆ ಕಾಂಗ್ರೆಸ್ಗೆ ಜಿಲ್ಲೆಯ ಮಟ್ಟಿಗೆ ದೊಡ್ಡ ನಷ್ಟವಾಗಲಿದೆ.
ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಇತ್ತೀಚೆಗೆ ಆಯೋಜಿಸಿದ್ದ ನವಸಂಕಲ್ಪ ಚಿಂತನಾ ಶಿಬಿರ ಕಾಯಕರ್ತರಲ್ಲಿ ಉತ್ಸಾಹ ಮೂಡಿಸುವಲ್ಲಿ ವಿಫಲವಾಗಿದ್ದು, ಮುಖಂಡರ ನಡುವಿನ ಮುನಿಸು ಪ್ರದರ್ಶನಕ್ಕಷ್ಟೇ ವೇದಿಕೆಯಾಗಿತ್ತು ಎನಿಸಿದೆ. ಜತೆಗೆ ಜಿಲ್ಲೆಯಲ್ಲಿ ಸರ್ವಸಮ್ಮತ ಜಿಲ್ಲಾಧ್ಯಕ್ಷರ ನೇಮಕ ಕೂಡ ಕಾಂಗ್ರೆಸ್ಗೆ ಸಾಧ್ಯವಾಗುತ್ತಿಲ್ಲ.
ಶಿಬಿರಕ್ಕೂ ಅವರೇ, ಚುನಾವಣೆಗೂ ಅವರೇ ಸಾರಥ್ಯ!: ಎಐಸಿಸಿ, ಕೆಪಿಸಿಸಿ ಶಿಬಿರಗಳಲ್ಲಿ ನಡೆದಂತೆ ಜಿಲ್ಲಾಮಟ್ಟದ ಶಿಬಿರದಲ್ಲಿಯೂ ಸಾಮಾಜಿಕ ನ್ಯಾಯ, ಸಬಲೀಕರಣ ಸಮಿತಿ (ಎಚ್.ವಿ.ವೆಂಕಟೇಶ್), ಸಂಟನಾ ಸಮಿತಿ (ಡಾ.ಎಚ್.ಡಿ.ರಂಗನಾಥ್), ಯುವ, ಮಹಿಳೆ, ಶಿಕ್ಷಣ ಹಾಗೂ ಉದ್ಯೋಗ ಸಮಿತಿ (ಬೆಮೆಲ್ ಕಾಂತರಾಜು), ರಾಜಕೀಯ ವ್ಯವಹಾರ (ಡಾ.ರಫೀಕ್ಅಹ್ಮದ್), ಕೃಷಿ ಹಾಗೂ ನೀರಾವರಿ ಸಮಿತಿಗಳಿಗೆ ಟಿ.ಬಿ.ಜಯಚಂದ್ರ ಹಾಗೂ ಕೆ.ಷಡಕ್ಷರಿ ನೇತೃತ್ವದಲ್ಲಿ ಸಭೆ ನಡೆದಿದೆ.
ಚುನಾವಣೆಯಲ್ಲಿ ಸ್ಪರ್ಧಿಸುವವರೂ ಅವರೇ, ಶಿಬಿರದಲ್ಲಿ ಸಂಟನೆಯ ಬಗ್ಗೆ ತಿಳಿಸುವವರೂ ಅವರೇ ಆಗಿದ್ದು ಹೊಸತನಕ್ಕೆ ಅವಕಾಶವಿಲ್ಲದಂತಾಗಿದೆ. ಎಸ್ಸ್ಸಿಗೆ ಮೀಸಲಾಗಿರುವ ನೆಲಮಂಗಲ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಡಾ.ಜಿ.ಪರಮೇಶ್ವರ ಇತ್ತೀಚೆಗಷ್ಟೇ ಕಾಂಗ್ರೆಸ್ಗೆ ಬಂದಿರುವ ಬೆಮೆಲ್ ಕಾಂತರಾಜುಗೆ ವೇದಿಕೆಗಳಲ್ಲಿ ವಿಶೇಷ ಮನ್ನಣೆ ನೀಡುತ್ತಿದ್ದಾರೆ ಎಂಬ ಮುನಿಸು ಕೂಡ ಕಾಂಗ್ರೆಸ್ ಪಾಳಯದಲ್ಲಿ ಶುರುವಾಗಿದೆ.
ಎಸ್ಪಿಎಂಗೆ ಬಿಜೆಪಿ ಗಾಳ ಬಹುತೇಕ ಸಕ್ಸಸ್ ?: ನವ ಸಂಕಲ್ಪ ಶಿಬಿರದಿಂದಲೂ ದೂರಉಳಿದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್ನಿಂದ ದೂರವಾಗಿರುವುದನ್ನು ಮತ್ತೊಮ್ಮೆ ದೃಢವಾಗಿಸಿದ್ದಾರೆ. ಸಂಸತ್ ಚುನಾವಣೆ ದೃಷ್ಟಿಯಿಂದ ಅವರನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂಬ ಗುಸುಗುಸು ಜಿಲ್ಲಾ ರಾಜಕೀಯದಲ್ಲಿ ಕೇಳಿಬರುತ್ತಿದೆ.
ಜಿಲ್ಲೆಯ ಕಾಂಗ್ರೆಸ್ ಮುಖಂಡರೂ ಎಸ್ಪಿಎಂ ಅವರನ್ನು ಉಳಿಸಿಕೊಳ್ಳುವ ಸಣ್ಣ ಪ್ರಯತ್ನ ಕೂಡ ಮಾಡದಿರುವುದು ಬಿಜೆಪಿಗೆ ದೊಡ್ಡ ಲಾಭ ತರುವ ಸಾಧ್ಯತೆಯಿದೆ. ಸಂಸತ್ ಚುನಾವಣೆಗೂ ಮುಂಚೆ ಬರುವ ಕುಣಿಗಲ್ ವಿಧಾನಸಭಾ ಕ್ಷೇತ್ರದ ಟಿಕೆಟ್ಗೆ ಪಟ್ಟು ಹಿಡಿದಿರುವ ಮುದ್ದಹನುಮೇಗೌಡ ಜತೆ ದೆಹಲಿ ಮಟ್ಟದ ಬಿಜೆಪಿ ಮುಖಂಡರೇ ಮಾತನಾಡಿದ್ದು, ಜಿಲ್ಲೆಯ ಪ್ರಭಾವಿ ಒಕ್ಕಲಿಗ ಸಮುದಾಯದ ಮುಖಂಡ ಕಮಲ ಪಾಳಯದಲ್ಲಿ ಕಾಣಿಸಿಕೊಳ್ಳುವ ಸಮಯ ದೂರವಿಲ್ಲ ಎಂಬ ಮಾತಿದೆ.