

ಬಾಗಲಕೋಟೆ: ಮೊದಲೇ ಕೊತ ಕೊತ ಎನ್ನುತ್ತಿರುವ ಹುನಗುಂದ ರಾಜಕೀಯಕ್ಕೆ ಇದೀಗ ಗೋಕಾಕ ಸಾಹುಕಾರ ರಮೇಶ ಜಾರಕಿಹೊಳಿ ಎಂಟ್ರಿ ಹೊಡೆದಿದ್ದಾರೆ.
ಕಾಂಗ್ರೆಸ್ ಮುಖಂಡ ವಿಜಯಾನಂದ ಕಾಶಪ್ಪನವರ ವಿರುದ್ದ ರಾಜಕೀಯವಾಗಿ ತೊಡೆತಟ್ಟಿದ್ದು, ಮಾಜಿ ಶಾಸಕನ ವಿರುದ್ದ ಹಿಂದ ಅಸö ಪ್ರಯೋಗ ಮಾಡಿದ್ದಾರೆ.
ಬುಧವಾರ ಇಳಕಲ್ಲ ನಗರದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಬಹಿರಂಗ ಸಮಾವೇಶಕ್ಕೆ ಆಗಮಿಸಿದ್ದ ರಮೇಶ ಜಾರಕಿಹೊಳಿ ತಮ್ಮ ಇಡೀ ಭಾಷಣವನ್ನು ವಿಜಯಾನಂದ ಕಾಶಪ್ಪನವರ ವಿರುದ್ದ ಏಕ ವಚನದ ವಾಗ್ದಾಳಿಗೆ ಮೀಸಲಿಟ್ಟರು.
ಕಾಂಗ್ರೆಸ್ ಪಕ್ಷ ಕೋಮುವಾದಿ ಪಕ್ಷ. ಜಾತಿ ಜಾತಿಗಳ ನಡುವೆ ಜಗಳ ಹಚ್ಚಿ ಮತಬ್ಯಾಂಕ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ಜಾರಕಿಹೊಳಿ, ಇಲ್ಲಿನ ಮಾಜಿ ಶಾಸಕರ ಹೆಸರು ಹೇಳದೇ ಶಾಸಕ ದೊಡ್ಡನಗೌಡ ಪಾಟೀಲರು ಪ್ರಶ್ನಾರ್ಥಕ ಚಿನ್ಹೆ ಇಟ್ಟಿದ್ದಾರೆ. ನಾನು ಹೇಳುತ್ತೇನೆ. ವಿಜಯಾನಂದ ಕಾಶಪ್ಪನವರ ಬೆಳಗಾವಿ ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಹುಕ್ಕೇರಿ, ಗೋಕಾಕಗೆ ಬಂದು ಬೇರೆ ಬೇರೆ ಜಾತಿಯವರ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡಿದ್ದಾನೆ. ಬೇರೆ ಜಾತಿಯವರ ಮತ ಕೇಳುವ ನೈತಿಕತೆ ಕಳೆದುಕೊಂಡಿದ್ದಾನೆ ಎಂದರು.
ಶಾಸಕರಾಗಿರಲಿ, ಲೋಕಸಭಾ ಸದಸ್ಯರು ಯಾರೇ ಆಗಲಿ ಒಂದು ಜಾತಿಗೆ ಸೀಮಿತರಾಗಬಾರದು. ಹಾಗೆಂದು ನಾವು ಪ್ರಮಾಣ ಮಾಡಿರುತ್ತೇವೆ. ಆದರೆ, ವಿಜಯಾನಂದ ಕಾಶಪ್ಪನವರ ಬೇರೆ ಜಾತಿಯವರಿಗೆ ಅಪಮಾನ ಮಾಡಿದ್ದಾನೆ. ಹೀಗಾಗಿ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದವರು ನಿಜವಾಗಿ ರಕ್ತ ಇದ್ದರೆ ಯಾವುದೇ ಪರಿಸ್ಥಿತಿಯಲ್ಲಿ ಮತ ಹಾಕಬಾರದು. ಕಾರಣ ಈ ಜನಾಂಗಗಳಿಗೆ ಜಾತಿ ನಿಂಧನೆ ಮಾಡಿದ್ದಾನೆ. ನಾವು ಶೇ. ೭೪ ರಷ್ಟು ಮತದಾರರು ಇದ್ದೇವೆ. ನಾವು ತಿರುಗಿ ಬಿದ್ದರೆ ಅವನ ಪರಿಸ್ಥಿತಿ ಏನು ಎಂದು ವಿಚಾರ ಮಾಡಬೇಕು ಎಂದು ಎಚ್ಚರಿಸಿ, ಚುನಾವಣೆಯಲ್ಲಿ ಮತ್ತೆ ನಾನು ಬರುತ್ತೇನೆ ಎಂದು ಹೇಳಿದರು.
ಪಂಚಮಸಾಲಿ ಮೀಸಲಾತಿ ಹೋರಾಟದ ವೇಳೆ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾಗಿರುವ ವಿಜಯಾನಂದ ಕಾಶಪ್ಪನವರ ಬೆಳಗಾವಿ ಜಿಲ್ಲೆಯಲ್ಲಿ ವಿವಿಧೆಡೆ ನಡೆದ ಸಮಾವೇಶಗಳಲ್ಲಿ ಜಾರಕಿಹೊಳಿ ಅವರ ವಿರುದ್ದ ವಾಗ್ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇನ್ನು ಮೂರು ದಿನಗಳ ಕಾಲ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಡೆದಿದ್ದು, ಆರು ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳದ ರಮೇಶ ಜಾರಕಿಹೊಳಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಕಾಂಗ್ರೆಸ ಅಭ್ಯರ್ಥಿ ಆಗಲಿರುವ ಹುನಗುಂದ ಕ್ಷೇತ್ರದ ಇಳಕಲ್ಲ ನಗರದ ಸಮಾವೇಶಕ್ಕೆ ಆಗಮಿಸಿ, ಅಲ್ಲಿ ವಾಗ್ದಾಳಿ ನಡೆಸಿ ಬಾದಾಮಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದೇ ಬೆಳಗಾವಿಗೆ ತೆರಳಿದರು.
ಇನ್ನು ಇಳಕಲ್ಲ ನಗರಕ್ಕೆ ಆಗಮಿಸಿದ ವೇಳೆ ಬೆಂಬಲಿಗರ ಅವರನ್ನು ವೇದಿಕೆ ವರೆಗೂ ಹೆಗಲ ಮೇಲೆಯೇ ಹೊತ್ತುಕೊಂಡು ತೆರಳಿದ್ದು ವಿಶೇಷವಾಗಿತ್ತು.