ಕೈ ಬೀಸಿ ಕರೆಯುತ್ತಿದೆ ಫಲ-ಪುಷ್ಪ ಪ್ರದರ್ಶನ

9 vikram 1
Published on

ವಿಕ್ರಮ ನಾಡಿಗೇರ ಧಾರವಾಡ
ಅಲ್ಲಿ ಎತ್ತ ನೋಡಿದರೂ ನಾನಾ ಬಣ್ಣಗಳ ಪುಷ್ಪಗಳದ್ದೇ ಲೋಕ…ಎಲ್ಲರನ್ನೂ ಸೆಳೆಯುವ ಬಣ್ಣ ಬಣ್ಣದ ಅಲಂಕಾರಿಕ ಪುಷ್ಪಗಳ ಸಂಗ್ರಹವೇ ಕಣ್ಣಿಗೆ ರಾಚುತ್ತಿದ್ದವು. ಇದರ ಜತೆಗೆ ಆರೋಗ್ಯ ಹಾಗೂ ಸೌಂದರ್ಯ ವರ್ಧಕ ಔಷಧೀಯ ಸಸ್ಯಗಳ ಸಮಾಗಮವಾಗಿತ್ತು.
ಈ ಮನಮೋಹಕ ದೃಶ್ಯಗಳು ಕಂಡು ಬಂದಿದ್ದು ನಗರದ ಕೃಷಿ ವಿಶ್ವ ವಿದ್ಯಾಲಯ ಆವರಣದಲ್ಲಿ ಶನಿವಾರದಿಂದ ಆರಂಭವಾದ ಕೃಷಿ ಮೇಳದಲ್ಲಿ. ಫಲ ಪುಷ್ಪ ಪ್ರದರ್ಶನದೊಂದಿಗೆ ಕಳೆದ ವರ್ಷದಿಂದ ಆರಂಭವಾಗಿರುವ ವಿಸ್ಮಯಕಾರಿ ಕೀಟ ಪ್ರಪಂಚ ಈ ಬಾರು ಮತ್ತಷ್ಟು ಮೆರಗು ಪಡೆದಿದೆ.
ಪ್ರದರ್ಶನಕ್ಕೆ ಪ್ರವೇಶಿಸುತ್ತಿದ್ದಂತೆ ಕಲ್ಲಂಗಡಿ, ಕುಂಬಳಕಾಯಿ ಸೇರಿ ತರಾವರಿ ತರಕಾರಿಗಳಿಂದ ತಯಾರಿಸಿದ ಶಿವ ಸ್ವಾಗತ ಕೋರುತ್ತಾನೆ. ಹಾಗೆ ಮುಂದೆ ಸಾಗಿದರೆ ಕಲ್ಲಂಗಡಿಯಲ್ಲಿ ಅರಳಿದ ಸಂಗೊಳ್ಳಿ ರಾಯಣ್ಣ, ಸುಭಾಷಚಂದ್ರ ಬೋಸ್, ಚಂದ್ರಯಾನ, ಹೀಗೆ ವಿವಿಧ ಕ್ಷೇತ್ರಗಳ ಮಹನೀಯರ ಚಿತ್ರಗಳನ್ನು ಕಾಣಬಹುದು. ಇದಲ್ಲದೆ ಕಲ್ಲಂಗಡಿಯಲ್ಲಿ ಸಿರಿಧಾನ್ಯಗಳ ಹೆಸರು ಬರೆದು ಹಣ್ಣಿನ ಮೇಲೆ ಆ ಧಾನ್ಯಗಳನ್ನು ಇರಿಸಿದ್ದು ವಿಶೇಷವಾಗಿತ್ತು.
ಕಣ್ಣಿಗೆ ತಂಪು ನೀಡುವ ವಿವಿಧ ತಳಿಯ ಪುಷ್ಪಗಳು, ಅಲಂಕಾರಿ, ಔಷಧಿ, ಸುಗಂಧ ಸಸ್ಯಗಳು ಗಮನ ಸೆಳೆಯುತ್ತಿವೆ. ಸಣ್ಣ ಪುಟ್ಟ ಕಾಯಿಲೆಗಳಿಗೆ ರಾಮಬಾಣವಾಗಿರುವ ಸಸ್ಯಗಳಾದ ಕರಿನೆಕ್ಕಿ(ಲಕ್ಕಿ), ಹಿಪ್ಪಲಿ, ಸರ್ಪಗಂಧ, ನಾಗದಾಳಿ ಸೇರಿ ಬಸಳೆ, ಚಕ್ರಮಣಿ, ದಾಸವಾಳ, ನಿಂಬೆ ಹುಲ್ಲು, ಭೃಂಗರಾಜ, ಜಲಬ್ರಾಹ್ಮಿ, ವಿವಿಧ ತಳಿಗಳ 60ಕ್ಕೂ ಹೆಚ್ಚು ಸಸ್ಯಗಳು ಪ್ರದರ್ಶನದಲ್ಲಿವೆ.
ವಿಸ್ಮಯಕಾರಿ ಕೀಟ ಪ್ರಪಂಚ: ಕೃಷಿ ಮೇಳದಲ್ಲಿ ಕಳೆದ ವರ್ಷದಿಂದ ಆರಂಭಿಸಿರುವ ವಿಸ್ಮಯಕಾರಿ ಕೀಟ ಪ್ರಪಂಚ ಈ ಬಾರಿ ಮತ್ತಷ್ಟು ಮೆರಗು ಪಡೆದಿದೆ. ಕೀಟಗಳ ಜೀವನ, ವೈವಿಧ್ಯತೆ, ಅವುಗಳ ಜೈವಿಕ ಪಾತ್ರ, ಉಪಯೋಗಗಳನ್ನು ತಿಳಿಸುವ ಉದ್ದೇಶದಿಂದ ಪ್ರದರ್ಶನ ಏರ್ಪಡಿಸಲಾಗಿದೆ. ಜೇನು, ಎರೆಹುಳು, ದಕ್ಷಿಣದ ಪಕ್ಷಿ ರೆಕ್ಕೆ ಚಿಟ್ಟೆ, ಅಪ್ಪರೆ ಕೀಟ, ಕಪ್ಪು ಸೈನಿಕ ನೊಣ, ಹೀಗೆ ಅಂದಾಜು ಸಾವಿರ ಬಗೆಯ ಕೀಟಗಳ ಮೂಲ ಆಕಾರ ರಚನೆ, ಜೀವನ ಕ್ರಿಯೆ ಮತ್ತು ವೈವಿಧ್ಯತೆ ಮಾಹಿತಿ ಜತೆಗೆ ಯಾವ ಕೀಟದಿಂದ ಏನೆಲ್ಲ ಪ್ರಯೋಜನ ಇದೆ ಎಂಬುದನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ.

ಗಮನ ಸೆಳೆದ ಚಿಟ್ಟೆಸ್ವಾಮಿ ಕ್ರೀಡಾಂಗಣಮೋಲ್ ಕ್ರಿಕೆಟ್ ಎಂಬ ಹೆಸರಿನ ಹುಳುಗಳಿಂದ ಎಂಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳು ನಿರ್ಮಿಸಿದ್ದ ಚಿಟ್ಟೆಸ್ವಾಮೀ ಕ್ರೀಡಾಂಗಣ ಎಲ್ಲರ ಗಮನ ಸೆಳೆಯಿತು. ಮೋಲ್ ಕ್ರಿಕೆಟ್ ಕೀಟಗಳನ್ನು ಮುಖ್ಯವಾಗಿಟ್ಟುಕೊಂಡು ಇನ್ನೂ 25 ಬಗೆಯ ಕೀಟಗಳೊಂದಿಗೆ ಈ ಕ್ರೀಡಾಂಗಣ ನಿರ್ಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net