

ಆಲೂರು : ಸಕಲೇಶಪುರ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಸೇರಿರುವ ಆಲೂರು ತಾಲೂಕಿನಲ್ಲಿಯೂ ಕೈ ಬಲಪಡಿಸಿದರೆ ಅಭ್ಯರ್ಥಿಯ ಗೆಲುವು ಸುಲಭವಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರು ಈ ಭಾಗಕ್ಕೆ ಹೆಚ್ಚಿನ ಒತ್ತು ನೀಡಿದ್ದು. ಪ್ರಜಾಧ್ವನಿ ಎಂಬ ಕಾರ್ಯಕ್ರಮ ನಡೆಸಲು ಆಲೂರು ಪಟ್ಟಣದಲ್ಲಿ ದೊಡ್ಡ ವೇದಿಕೆಯನ್ನು ಹಾಕಲಾಗಿದೆ.
ಫೆ.೨೮ ರಂದು ಮಂಗಳವಾರ ಬೆಳಗ್ಗೆ ೧೧ ಗಂಟೆಗೆ ಕೆ/ಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪ್ರಜಾಧ್ವನಿ ಬಸ್ ಪಟ್ಟಣಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೈ. ಕಾರ್ಯಕರ್ತರುಗಳು ಒಟ್ಟಾಗಿ ಸೇರಿ ಕೊನೆಪೇಟೆಯ ಬಿಕ್ಕೋಡು ರಸ್ತೆಯಲ್ಲಿರುವ ಖಾಸಗಿ ವ್ಯಕ್ತಿಯ ಜಮೀನಿನಲ್ಲಿ ಸಮಾವೇಶಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಜೆಡಿಎಸ್ ಕೋಟೆಯಲ್ಲಿ ಕೈ ಬಲಪಡಿಸುವ ತಂತ್ರ ರೂಪಿಸಿರುವ ಕಾಂಗ್ರೆಸ್ ವರಿಷ್ಠರು ಈಗಾಗಲೇ ಹಲವು ಬಾರಿ ಜಿಲ್ಲೆಗೆ ಆಗಮಿಸಿ ಕಾರ್ಯಕರ್ತರು ಹಾಗೂ ಪ್ರಮುಖ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಅಲ್ಲದೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಏರ್ಪಟ್ಟಿರುವ ಗೊಂದಲ ಶಮನ ಮಾಡಿ ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಈ ಬಾರಿ ಜಿಲ್ಲೆಯಲ್ಲಿ ಖಾತೆ ತೆರೆಯಲೆಬೇಕು ಎಂಬ ಕಾರಣಕ್ಕೆ ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಬಸ್ ಯಾತ್ರೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಸಂಸದ ಡಿ.ಕೆ ಸುರೇಶ್, ಪಕ್ಷದ ಜಿಲ್ಲಾ ಉಸ್ತುವಾರಿ ಆರ್.ಧ್ರುವನಾರಾಯಣ್ ಸೇರಿದಂತೆ ಪಕ್ಷದ ಜಿಲ್ಲಾಧ್ಯಕ್ಷ ಈ.ಎಚ್ ಲಕ್ಷ್ಮಣ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಕುಮಾರಸ್ವಾಮಿ ಹಾಗೂ ತಾಲೂಕು ಕಾಂಗ್ರೆಸ್‌ನ ಹಲವು ಮುಖಂಡರುಗಳು ಭಾಗಿಯಾಗಲಿದ್ದಾರೆ.
ಟಿಕೆಟ್‌ಗಾಗಿ ಕಸರತ್ತು: ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜಿಲ್ಲೆಯಲ್ಲಿ ಉತ್ತಮ ವಾತಾವರಣವಿದೆ ಎಂಬ ವಿಶ್ವಾಸದಲ್ಲಿರುವ ಹಲವು ಆಕಾಕ್ಷಿಗಳು ಟಿಕೆಟ್ ಪಡೆದು ಕಣಕ್ಕಿಳಿಯಬೇಕು ಎಂಬ ಆಶಯದಿಂದ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಅಂತೆಯೇ ಸಕಲೇಶಪುರ-ಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರದಲ್ಲಿಯೂ ಮುರಳಿ ಮೋಹನ್ ಮತ್ತು ಮಾಜಿ ಶಾಸಕ ಡಿ.ಮಲ್ಲೇಶ್ ಟಿಕೆಟ್ ಫೈಟ್‌ನಲ್ಲಿ ಮುಂದಿದ್ದಾರೆ. ಜಿಪಂ ಮಾಜಿ ಸದಸ್ಯ ಡಿ.ಸಿ.ಸಣ್ಣಸ್ವಾಮಿ, ಯುವ ಮುಖಂಡ ಹೆಬ್ಬನಹಳ್ಳಿ ಭುವನಾಕ್ಷ ಹಾಗೂ ಇತರರು ಟಿಕೆಟ್ ತಮ್ಮದಾಗಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಕಾಂಗ್ರೆಸ್‌ನ ಒಳ ಜಗಳ, ಬಣ ರಾಜಕಾರಣ ಇನ್ನಿಲ್ಲವಾಗಿಸಿ ಈ ಬಾರಿ ಚುನಾವಣೆಯಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಈ ಬಾರಿ ಖಾತೆ ತೆರೆಯಲು ಎಲ್ಲ ಅವಕಾಶಗಳಿವೆ. ಈಗಲಾದರೂ ಕೈ ಮುಖಂಡರು ಹಾಗೂ ಕಾರ್ಯಕರ್ತರು ಒಂದೇ ದಿಕ್ಕಿನೆಡೆ ಸಾಗುವಂತೆ ಮಾಡುವ ಹೊಣೆ ವರಿಷ್ಠರ ಮೇಲಿದೆ ಎನ್ನುತ್ತಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರು.