

ಕೇಶವಮೂರ್ತಿ ವಿ.ಬಿ. ಹಾವೇರಿ
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ಸೇರಿದಂತೆ 124 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆ, ಜಿಲ್ಲೆಯ ಟಿಕೆಟ್ ವಂಚಿತ ಆಕಾಂಕ್ಷಿಗಳಿಂದ ಪಕ್ಷಕ್ಕೆ ಬಂಡಾಯದ ಆತಂಕ ಶುರುವಾಗಿದೆ. ಟಿಕೆಟ್ ವಂಚಿತ ಆಕಾಂಕ್ಷಿಗಳು ಹಾಗೂ ಬೆಂಬಲಿಗರಲ್ಲಿ ಅಸಮಾಧಾನ ಮೂಡಿದ್ದು, ಅವರ ಮುಂದಿನ ನಡೆ ಬಗ್ಗೆ ಕುತೂಹಲ ಕೆರಳಿಸಿದೆ. ಅಭ್ಯರ್ಥಿಗಳ ಹೆಸರು ಘೋಷಣೆಯಾಗುತ್ತಿದ್ದಂತೆ ಅಭ್ಯರ್ಥಿಗಳು ಹಾಗೂ ಬೆಂಬಲಿಗರಲ್ಲಿ ಸಂತಸ ಮನೆ ಮಾಡಿದ್ದು, ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಟಿಕೆಟ್ ವಂಚಿತ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರಲ್ಲಿ ಬೇಸರದ ಛಾಯೆ ಮೂಡಿದ್ದು, ಮುಂದೆ ಏನು ? ಎಂಬ ಪ್ರಶ್ನೆ ಮೂಡಿದೆ. ಕೆಲವರು ಬಂಡಾಯ ಏಳುವ ಮುನ್ಸೂಚನೆ ನೀಡಿದ್ದರೆ, ಮತ್ತೆ ಕೆಲವರು ಬೆಂಬಲಿಗರ ಸಭೆ ಕರೆದು ಮುಂದಿನ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಈ ಕ್ಷೇತ್ರಗಳ ಪೈಕಿ ಒಂದೊಂದು ಕ್ಷೇತ್ರದಲ್ಲಿ ಐದಾರು ಆಕಾಂಕ್ಷಿಗಳು ಟಿಕೆಟ್‌ಗಾಗಿ ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದರು. ಕೆಲವರಂತೂ ತಮಗೇ ಟಿಕೆಟ್ ಪಕ್ಕಾ ಎಂದು ಹೇಳಿಕೊಂಡು ಕ್ಷೇತ್ರದ ತುಂಬ ಓಡಾಡಿಕೊಂಡಿದ್ದರು. ಬ್ಯಾನರ್, ಬಂಟಿಂಗ್, ಸಭೆ, ಸಮಾರಂಭಗಳ ಮೂಲಕ ಜನರನ್ನು ಸೆಳೆಯಲು ಮುಂದಾಗಿದ್ದರು. ಟಿಕೆಟ್ ಕೈತಪ್ಪುತ್ತಿದ್ದಂತೆ ಯಾರ ಕೈಗೂ ಸಿಗದಂತೆ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಕೆಲವರು ಗೌಪ್ಯ ಸಭೆಗಳನ್ನು ನಡೆಸಿ, ಹೈಕಮಾಂಡ್‌ಗೆ ಬಿಸಿ ಮುಟ್ಟಿಸಲು ಮುಂದಾಗಿರುವುದು ಗುಟ್ಟಾಗಿ ಉಳಿದಿಲ್ಲ. ‘ಟಿಕೆಟ್ ಯಾರಿಗೇ ಕೊಟ್ಟರೂ ಬೆಂಬಲಿಸಿ. ಕಾಂಗ್ರೆಸ್ ಗೆಲ್ಲಿಸಿ’ ಎಂದು ಟಿಕೆಟ್ ಆಕಾಂಕ್ಷಿಗಳಿಗೆ ಮೇಲಿಂದ ಮೇಲೆ ಕಿವಿಮಾತು ಹೇಳುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಒಂದು ಮಟ್ಟದಲ್ಲಿ ಬಂಡಾಯ ಶಮನದ ಕೆಲಸಕ್ಕೆ ಮೊದಲೇ ತಯಾರಿ ಮಾಡಿಕೊಂಡಿತ್ತಾದರೂ, ವಂಚಿತರು ಬಂಡಾಯ ಏಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಇದನ್ನು ಜಿಲ್ಲಾ, ರಾಜ್ಯ ಕಾಂಗ್ರೆಸ್ ಮುಖಂಡರು ಹೇಗೆ ನಿಭಾಯಿಸುತ್ತಾರೆ ಕಾದು ನೋಡಬೇಕಿದೆ. ಬಾಕ್ಸ್: ಹಾಲಿ- ಮಾಜಿಗಳಿಗೆ ಮಣೆ ನಿರೀಕ್ಷೆಯಂತೆ ಕಾಂಗ್ರೆಸ್ ಹೈಕಮಾಂಡ್ ಹಾಲಿ ಶಾಸಕರು ಹಾಗೂ ಮಾಜಿ ಶಾಸಕ, ಸಚಿವರಿಗೇ ಮಣೆ ಹಾಕಿದೆ. ಶಿಗ್ಗಾಂವಿ ಕ್ಷೇತ್ರವೊಂದನ್ನು ಬಿಟ್ಟು ಉಳಿದ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಘೋಷಿಸಿದೆ. ಹಾನಗಲ್ಲಗೆ ಹಾಲಿ ಶಾಸಕ ಶ್ರೀನಿವಾಸ ಮಾನೆ, ಹಾವೇರಿಗೆ ಮಾಜಿ ಸಚಿವ ರುದ್ರಪ್ಪ ಲಮಾಣಿ, ಬ್ಯಾಡಗಿಗೆ ಮಾಜಿ ಸಚಿವ ಬಸವರಾಜ ಶಿವಣ್ಣವರ, ಹಿರೇಕೆರೂರಗೆ ಯು.ಬಿ.ಬಣಕಾರ, ರಾಣೆಬೆನ್ನೂರಗೆ ಮಾಜಿ ಸಭಾಪತಿ ಕೆ.ಬಿ.ಕೋಳಿವಾಡರ ಪುತ್ರ ಪ್ರಕಾಶ ಕೋಳಿವಾಡ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಶಮನಕ್ಕೆ ಯತ್ನ
ಜಿಲ್ಲೆಯಲ್ಲಿ ಉಂಟಾಗಬಹುದಾದ ಬಂಡಾಯದ ಬಗ್ಗೆ ಜಿಲ್ಲಾ ಕಾಂಗ್ರೆಸ್ ಗಮನ ಹರಿಸಿದ್ದು, ಸದ್ಯದಲ್ಲೇ ಬಂಡಾಯ ಏಳುವ ಮುಖಂಡರನ್ನು ಕರೆಸಿ ಮಾತನಾಡುವ ಸಂಭವವಿದೆ. ಒಂದೆರೆಡು ದಿನದಲ್ಲಿ ಟಿಕೆಟ್ ವಂಚಿತರೊಂದಿಗೆ ಮಾತುಕತೆ ನಡೆಸಲಾಗುವುದು. ಬಂಡಾಯ ಏಳದಂತೆ ಕ್ರಮ ಜರುಗಿಸಲಾಗವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಕೋಟ್:
ಜ್ಯಾತ್ಯಾತೀತ, ಸಮಾಜವಾದಿ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಮುಖಂಡರು ಅಂದು ಸ್ವಾರ್ಥಕ್ಕಾಗಿ ಜೆಡಿಎಸ್‌ನಿಂದ ಬಂದಿದ್ದ ಬಿ.ಸಿ.ಪಾಟೀಲಗೆ, ಇಂದು ಬಿಜೆಪಿಯಿಂದ ಬಂದ ಯು.ಬಿ.ಬಣಕಾರಗೆ ಟಿಕೆಟ್ ಕೊಟ್ಟಿದ್ದಾರೆ. ಪಕ್ಷಕ್ಕಾಗಿ ದುಡಿದವರನ್ನು ದಯನೀಯವಾಗಿ ನಡೆಸಿಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ, ಬೆಂಬಲಿಗರ ಸಭೆ ನಡೆಸುತ್ತೇನೆ. ಜನಾದೇಶ ಏನಿದೆ ಅದಕ್ಕೆ ತಲೆ ಬಾಗುತ್ತೇನೆ. ಅವರು ಹೇಗೆ ಹೇಳುತ್ತಾರೆ ಹಾಗೆ ನಡದುಕೊಳ್ಳುತ್ತೇನೆ.
ಬಿ.ಎಚ್.ಬನ್ನಿಕೋಡ, ಮಾಜಿ ಶಾಸಕ, ಹಿರೇಕೆರೂರ
ಕೋಟ್:
ರಾಜಕೀಯಕ್ಕಾಗಿ ಎಸ್‌ಪಿ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದು ಸತತವಾಗಿ 8 ವರ್ಷದಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ಕಳೆದ ಬಾರಿ ಟಿಕೆಟ್ ಕೇಳಿದಾಗ ಮುಂದಿನ ಸಲ ಕೊಡುವುದಾಗಿ ಹೇಳಿದ್ದರು. ಈ ಬಾರಿ ಕ್ಷೇತ್ರದಲ್ಲಿ ಅಗತ್ಯ ತಯಾರಿ ನಡೆಸಿದಾಗಲೂ ಟಿಕೆಟ್ ನೀಡದಿರುವುದು ಬೇಸರ ಮೂಡಿಸಿದೆ. ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ.
ಶಿವಕುಮಾರ ತಾವರಗಿ, ಹಾವೇರಿ
ಕೋಟ್:
ನಾನೂ ಕೂಡ ಹಾವೇರಿ ಟಿಕೆಟ್ ಆಕಾಂಕ್ಷಿಯಾಗಿದ್ದು, ನನ್ನ ಹೆಸರು ಕೈಬಿಡಲಾಗಿದೆ. ಪಕ್ಷೇತರನಾಗಿ ಸ್ಪರ್ಧಿಸುವ ನಿರ್ಣಯ ಕೈಗೊಂಡಿಲ್ಲ. ಹಿರಿಯರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತಿಳಿಸುತ್ತೇನೆ.
ಎಂ.ಎಂ. ಹಿರೇಮಠ, ಹಾವೇರಿ
ಕೋಟ್:
ಸೋಮವಾರ ರಾಣೆಬೆನ್ನೂರ ಕ್ಷೇತ್ರದ 86 ಹಳ್ಳಿಗಳ ಬೆಂಬಲಿಗರ ಸಭೆ ಕರೆದು ಬೆಂಬಲಿಗರು, ಅಭಿಮಾನಿಗಳೊಂದಿಗೆ ಚರ್ಚಿಸಿ ಮುಂದಿನ ನಡೆಯ ಬಗ್ಗೆ ತಿಳಿಸುತ್ತೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಹೋಗಲ್ಲ.
ಜಟ್ಟೆಪ್ಪ ಕರೇಗೌಡ್ರ, ರಾಣೆಬೆನ್ನೂರ