ಕೈ ನಾಯಕರ ಬುಡಕ್ಕೆ ಬೆಂಕಿ ಬೀಳುವ ಭಯ

bjppppppp
Published on

ಚಿತ್ರದುರ್ಗ:ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ, ಸಚಿವ ಶರಣಪ್ರಕಾಶ್ ಪಾಟೀಲ ರಾಜೀನಾಮೆಗೆ ಆಗ್ರಹಿಸಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿತು.
ಮದಕರಿ ನಾಯಕ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಶಾಸಕ ಡಾ.ಎಂ.ಚಂದ್ರಪ್ಪ, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ರಾಜ್ಯ ಎಸ್ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು, ಎಂಎಲ್ಸಿ ಕೆ.ಎಸ್.ನವೀನ್, ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ಜಿಲ್ಲಾಧ್ಯಕ್ಷ ಎ.ಮುರಳಿ, ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಸೇರಿ ಅನೇಕ ಪ್ರಮುಖರು, ರ್ಕಾಯಕರ್ತರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.
ಇದಕ್ಕೂ ಮುನ್ನ ನಗರದ ವೀರವನಿತೆ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ವಿಜಯೇಂದ್ರ, 187 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ, ಸಚಿವ ಶರಣಪ್ರಕಾಶ್ ಪಾಟೀಲ ಹಾಗೂ ನಿಗಮದ ಅಧ್ಯಕ್ಷ ಬಸವಗೌಡ ದದ್ದಲ್ ಅವರು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.
ಎಸ್ಐಟಿಯಿಂದ ಪ್ರಕರಣಕ್ಕೆ ನ್ಯಾಯ ಸಿಗದು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿ.ನಾಗೇಂದ್ರ ಅವರಿಗೆ ಎಸ್ಐಟಿ ಈವರೆಗೂ ನೋಟಿಸ್ ಕೊಟ್ಟಿಲ್ಲ, ವಿಚಾರಣೆಗೂ ಕರೆದಿಲ್ಲ ಎಂದು ದೂರಿದರು.
ಚಂದ್ರಶೇಖರ್ ಬರೆದ ಡೆತ್ನೋಟ್ ಕಾಂಗ್ರೆಸ್ ಸರ್ಕಾರಕ್ಕೆ ಮರಣ ಶಾಸನವಾಗಲಿದೆ. ಅದೇ ರೀತಿ ಬೇರೆ, ಬೇರೆ ನಿಗಮಗಳಲ್ಲಿ ಆದ ಹಗರಣಗಳು ಕೂಡ ಶೀಘ್ರವೇ ಬೆಳಕಿಗೆ ಬರಲಿವೆ. ಪರಿಶಿಷ್ಟರ ವರ್ಗದ ಜನರ ಹಣ ನುಂಗಿರುವ ಈ ಸರ್ಕಾರದ ವಿರುದ್ಧ ಪಕ್ಷ ನಿರಂತರವಾಗಿ ಹೋರಾಟ ನಡೆಸಲಿದೆ ಎಂದರು.
ಸಿಬಿಐ ತನಿಖೆಗೂ ಸರ್ಕಾರ ಸಹಕರಿಸುತ್ತಿಲ್ಲ. ರಾಜ್ಯ ಸರ್ಕಾರ, ಕಾಂಗ್ರೆಸ್ ಹೈಕಮಾಂಡ್ಗೆ ಎಟಿಎಂ ಆಗಿದೆ ಎಂಬ ಆರೋಪಕ್ಕೆ ಪುರಾವೆ ಎಲ್ಲಿದೆ ಎಂದು ಸಿಎಂ, ಡಿಸಿಎಂ ಕೇಳುತ್ತಿದ್ದರು. ಈಗ ಪುರಾವೆಗಳು ಸಿಕ್ಕಿವೆ. ಹೈದರಾಬಾದ್ನಲ್ಲಿ ಬಂಧಿತ ನಿವೃತ್ತ ಅಧಿಕಾರಿ ಸತ್ಯನಾರಾಯಣ ತಮಗೆ ಕೊಲೆ ಬೆದರಿಕೆ ಇದೆ ಎಂದು ಕೋರ್ಟ್ನಲ್ಲಿ ಹೇಳಿದ್ದಾರೆ ಎಂದರು.
ರಾಜ್ಯದ ಇತಿಹಾಸದಲ್ಲೇ ಎಂದೂ ಇಂಥ ಹಗರಣ ನಡೆದಿಲ್ಲ. ತಮ್ಮ ಬುಡಕ್ಕೆ ಬೆಂಕಿ ಬೀಳುತ್ತದೆ ಎಂಬ ಕಾರಣಕ್ಕೆ ಇದನ್ನು ಮುಚ್ಚಿ ಹಾಕಲು ಕೈ ನಾಯಕರು ಪ್ರಯತ್ನಿಸುತ್ತಿದ್ದಾರೆ. ಹಗರಣ ಖಂಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಸಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಪರಿಶಿಷ್ಟ ವರ್ಗಗಳ ಜನರು ಅಧಿಕ ಸಂಖ್ಯೆಯಲ್ಲಿರುವುದರಿಂದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇನೆ. ಭ್ರಷ್ಟಾಚಾರ ರಹಿತ ಆಡಳಿತದ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ನಿಂದ ಒಂದೇ ಒಂದು ಅಭಿವೃದ್ಧಿ ಕೆಲಸವಾಗಿಲ್ಲ. ಗ್ಯಾರಂಟಿಗಳಿಗೆ ಹಣ ಸಾಲುತ್ತಿಲ್ಲ ಎಂದರು.
*ಬಾರ್ ಬಿಲ್ ಕಟ್ಟಿದ್ದಾರೆ: ಹಿಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನಾಯಕ ಸಮಾಜದ ಅನುಕೂಲಕ್ಕಾಗಿ ನಿಗಮ ಸ್ಥಾಪಿಸಿದ್ದರು. ನಿಗಮದ ಹಣ ತೆಲಂಗಾಣ, ಆಂಧ್ರಪ್ರದೇಶಕ್ಕೆ ವರ್ಗವಾಗಿದ್ದು, ಲೋಕಸಭಾ ಎಲೆಕ್ಷನ್ನಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಬಾರ್ ಬಿಲ್ಗೂ ನಿಗಮದ ಹಣ ಕೊಡಲಾಗಿದೆ.
ಅಧಿಕಾರದಲ್ಲಿ ಮುಂದುವರಿಯಲು ಸಿಎಂಗೆ ಯೋಗ್ಯತೆ ಇಲ್ಲ. ಅವರ ಸರ್ಕಾರಕ್ಕೆ ಜನ ಶಾಪ ಹಾಕುತ್ತಿದ್ದಾರೆ. ಬಡವರಿಗೆ ಮೀಸಲಿಟ್ಟಿದ್ದ ಹಣ ಲೂಟಿಯಾಗಿದೆ. ದೇವರು ಕೂಡ ಈ ಸರ್ಕಾರವನ್ನು ಕ್ಷಮಿಸುವುದಿಲ್ಲ. ಎಸ್ಸಿಪಿ, ಟಿಎಸ್ಪಿ ಅನುದಾನ, ಕೇಂದ್ರದ ಅನುದಾನವೂ ದುರುಪಯೋಗವಾಗಿದೆ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಣಕ್ಕಾಗಿ ಒತ್ತಾಯ ಮಾಡಿದ್ದರಿಂದಾಗಿ, ಎಲ್ಲ ಇಲಾಖೆಗಳಲ್ಲೂ ನೂರಾರು ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ನಿಗಮದ ಹಗರಣದಲ್ಲಿ ಭಾಗಿಯಾಗಿರುವ ಎಲ್ಲರೂ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net