

ಚಿತ್ರದುರ್ಗ: ಅಲ್ಪಮತವಿದ್ದರೂ ಪಕ್ಷಾತೀತವಾಗಿ ಸದಸ್ಯರ ವಿಶ್ವಾಸ ಗಳಿಸುವ ಮೂಲಕ ಕಾಂಗ್ರೆಸ್ ಚಿತ್ರದುರ್ಗ ನಗರಸಭೆಯ ಅಧಿಕಾರ ಪಡೆಯುವಲ್ಲಿ ಸೋಮವಾರ ಯಶಸ್ವಿಯಾಯಿತು. ಅಧ್ಯಕ್ಷೆಯಾಗಿ ಬಿ.ಎನ್.ಸುಮಿತಾ, ಬಿಜೆಪಿ ಸದಸ್ಯೆ ಜಿ.ಎಸ್.ಶ್ರೀದೇವಿ ಕೈಯೊಂದಿಗೆ ಗುರುತಿಸಿಕೊಂಡು ಉಪಾಧ್ಯಕ್ಷೆಯಾಗಿ ಗೆಲುವಿನ ನಗೆ ಬೀರಿದರು.
ಕಾಂಗ್ರೆಸ್-ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟಿದ್ದು, ಕ್ರಮವಾಗಿ ಅಧ್ಯಕ್ಷ ಸ್ಥಾನಕ್ಕೆ ಸದಸ್ಯರಾದ ಬಿ.ಎನ್.ಸುಮಿತಾ, ಎಸ್.ಸಿ. ತಾರಕೇಶ್ವರಿ, ಉಪಾಧ್ಯಕ್ಷ ಸ್ಥಾನಕ್ಕೆ ಸದಸ್ಯರಾದ ಜಿ.ಎಸ್.ಶ್ರೀದೇವಿ, ಬಿ.ಎಸ್.ರೋಹಿಣಿ ನಾಮಪತ್ರ ಸಲ್ಲಿಸಿದ್ದರು. ಯಾರೂ ನಾಮಪತ್ರ ಹಿಂಪಡೆಯದ ಕಾರಣ ಮತದಾನದ ಮೂಲಕ ಆಯ್ಕೆ ನಡೆಯಿತು.
ಚಿತ್ರದುರ್ಗ ನಗರಸಭೆಗೆ ಚುನಾಯಿತ 35 ಸದಸ್ಯರಿದ್ದು, ಸದಸ್ಯ ಪೊಲೀಸ್ ಡಿ.ಮಲ್ಲಿಕಾರ್ಜುನ್ ಮೃತಪಟ್ಟಿರುವ ಕಾರಣ ಸಂಖ್ಯೆ 34ಕ್ಕೆ ಇಳಿದಿತ್ತು. ಸಂಸದರು, ಸ್ಥಳೀಯ ಶಾಸಕರದ್ದು ಸೇರಿ 36 ಮತ ಚಲಾಯಿಸಲು ಅವಕಾಶವಿತ್ತು. 17 ಸದಸ್ಯರೊಂದಿಗೆ ಬಹುಮತ ಸಮೀಪವಿದ್ದ ಬಿಜೆಪಿ ಈ ಹಿಂದೆ ಅಧಿಕಾರದ ಗದ್ದುಗೆ ಏರಿತ್ತು. 19 ಮತ ಪಡೆದವರಿಗೆ ಈ ಬಾರಿ ಗೆಲುವಿನ ಮಾರ್ಗವಿತ್ತಾದರೂ ಕಮಲಪಡೆ ಸುಲಭವಾಗಿ ಕೈಚೆಲ್ಲಿ ತೀವ್ರ ಮುಖಭಂಗ ಅನುಭವಿಸಿತು.
ವಿಪ್ ಜಾರಿಗೆ ಕಿವಿಗೊಡದ ನಾಲ್ವರು ಬಿಜೆಪಿ ಸದಸ್ಯರು ಕೈ ಹಿಡಿದಿದ್ದರಿಂದ ಹಿನ್ನಡೆ ಉಂಟಾಯಿತು. ಇನ್ನೂ ಜೆಡಿಎಸ್‌ನ 6 ಸದಸ್ಯರು ಕಾಂಗ್ರೆಸ್ ಬೆಂಬಲಿಸಿದ್ದರಿಂದ ಮೈತ್ರಿ ಧರ್ಮ ಪಾಲನೆಯಾಗದೆ, ಒಳಪೆಟ್ಟು ನೀಡಿತು. ಅದೇನಿದ್ದರೂ ಕೇಂದ್ರಕ್ಕೆ ಸೀಮಿತ. ಚಿತ್ರದುರ್ಗ ನಗರಸಭೆಗೆ ಅನ್ವಯಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದಂತ್ತಿತ್ತು.
ಚುನಾವಣೆಗೂ ಮುನ್ನ ಕೇವಲ ನಾಲ್ವರು ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಎರಡು ದಿನ ಮುನ್ನ ಇಬ್ಬರು ಪಕ್ಷೇತರರನ್ನು ಸೆಳೆದು ಸಂಖ್ಯೆಯನ್ನು 6ಕ್ಕೆ ಹೆಚ್ಚಿಸಿಕೊಂಡಿತ್ತು. ಇನ್ನುಳಿದ 5 ಪಕ್ಷೇತರರ ಬೆಂಬಲವೂ ದೊರೆಯಿತು.
ಚುನಾವಣೆಯಲ್ಲಿ ಒಟ್ಟು 35 ಮತಗಳು ಚಲಾವಣೆಯಾದವು. ಕೈ-ತೆನೆ ತಲಾ ಆರು, ಐವರು ಪಕ್ಷೇತರರು, ಕಮಲ-4, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮತವೂ ಸೇರಿ ಕಾಂಗ್ರೆಸ್‌ನ ಇಬ್ಬರೂ ತಲಾ 22 ಮತಗಳಿಸಿದ್ದರಿಂದ ಬಿ.ಎನ್.ಸುಮಿತಾ, ಜಿ.ಎಸ್.ಶ್ರೀದೇವಿ ಕೊರಳಿಗೆ ವಿಜಯದ ಮಾಲೆ ಬಿದ್ದಿತು. ಪ್ರತಿಸ್ಪರ್ಧಿಗಳು ತಲಾ 13 ಮತ ಪಡೆದು ಸೋಲುಂಡರು. ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಗೆಲುವು ನಿಶ್ಚಿತ ಎಂಬ ಕುರಿತು ಮಾತುಗಳು ಕೇಳಿಬಂದವು. ಶಾಸಕರ ಪ್ರಯತ್ನ ಕೊನೆಗೂ ಸಫಲವಾಯಿತು.
ಕೆ.ಸಿ.ವೀರೇಂದ್ರ ಪಪ್ಪಿ ಸುದ್ದಿಗಾರರೊಂದಿಗೆ ಮಾತನಾಡಿ, ನಗರದ ಅಭಿವೃದ್ಧಿಗಾಗಿ ಸದಸ್ಯರು ಪಕ್ಷ ಮರೆತು ಸಹಕರಿಸಿದ್ದರಿಂದ ಸುಮಿತಾ, ಶ್ರೀದೇವಿ ಬಹುಮತದಿಂದ ಆಯ್ಕೆಯಾಗಿದ್ದಾರೆ ಎಂದರು.
ನೂತನ ಅಧ್ಯಕ್ಷೆ ಸುಮಿತಾ ಮಾತನಾಡಿ, ನಗರದ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.
ಉಪಾಧ್ಯಕ್ಷೆ ಶ್ರೀದೇವಿ ಮಾತನಾಡಿ, ಶಾಸಕರ ಸಹಕಾರದೊಂದಿಗೆ ವಾರ್ಡ್‌ಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡುವ ಗುರಿ ಹೊಂದಿದ್ದೇನೆ ಎಂದು ತಿಳಿಸಿದರು.
ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಆಯ್ಕೆಯಾದವರ ಹೆಸರು ಘೋಷಿಸಿದರು. ತಹಸೀಲ್ದಾರ್ ಡಾ.ನಾಗವೇಣಿ, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಇತರರಿದ್ದರು.
ಸಂಭ್ರಮಾಚರಣೆ: ಚುನಾವಣಾಧಿಕಾರಿ ಘೋಷಣೆಗೂ ಮುನ್ನವೇ ಕಾಂಗ್ರೆಸ್ ಕಾರ್ಯಕರ್ತರು ನಗರಸಭೆ ಕಚೇರಿ ಮುಂಭಾಗ ಪಟಾಕಿ ಸಿಡಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದರು. ವಿಜಯಿಯಾದ ಸುಮಿತಾ, ಶ್ರೀದೇವಿ ಅವರಿಗೆ ಹೂವಿನ ಮಾಲೆ ಹಾಕಿ ಶುಭ ಕೋರಿದರು. ನಂತರ ಶಾಸಕರ ನೇತೃತ್ವದಲ್ಲಿ ತೆರೆದ ವಾಹನವೇರಿ ಕಾರ್ಯಕರ್ತರೊಂದಿಗೆ ಸಂಭ್ರಮದಲ್ಲಿ ಪಾಲ್ಗೊಂಡರು.