

ಲಕ್ಷ್ಮೇಶ್ವರ: ಕರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ನ್ಯಾಯ ಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಪಡೆಯುವ ಮೊದಲು ಪಡಿತರದಾರರು ಕೈತೊಳೆದುಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆದೇಶದನ್ವಯ ನ್ಯಾಯ ಬೆಲೆ ಅಂಗಡಿಗಳಲ್ಲಿ ನೀರು, ಡೆಟಾಲ್ ಲಿಕ್ವಿಡ್, ಸ್ಯಾನಿಟರಿ ಇಡಬೇಕು. ಪಡಿತರ ಚೀಟಿದಾರರು ಕೈ ತೊಳೆದುಕೊಂಡು ಬಯೋಮೆಟ್ರಿಕ್ ನೀಡಬೇಕು. ಅಲ್ಲದೆ, ಈ ಬಯೋಮೆಟ್ರಿಕ್ ಯಂತ್ರವನ್ನು ಪದೇ ಪದೆ ಸ್ವಚ್ಛಗೊಳಿಸಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಜಾಗೃತಿಯ ಭಿತ್ತಿಚಿತ್ರಗಳನ್ನು ಅಂಟಿಸಿರಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಪಡಿತರದಾರರು ಒಮ್ಮೆಲೆ ಸೇರದಂತೆ ಕ್ರಮಕೈಗೊಳ್ಳಬೇಕು. ಒಟ್ಟಿನಲ್ಲಿ ಮಹಾಮಾರಿ ಕರೊನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲರ ಪಾತ್ರ, ಕರ್ತವ್ಯ ಇದೆ ಎಂಬುದು ಸರ್ಕಾರದ ನಿಲುವಾಗಿದೆ. ಈ ಹಿನ್ನೆಲೆಯಲ್ಲಿ ಶಿರಹಟ್ಟಿ/ಲಕ್ಷ್ಮೇಶ್ವರ ತಾಲೂಕಿನ 62 ನ್ಯಾಯಬೆಲೆ ಅಂಗಡಿಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ನ್ಯಾಯಬೆಲೆ ಅಂಗಡಿ ಮಾಲೀಕ, ಲಕ್ಷ್ಮೇಶ್ವರದ ಬಸವರಾಜ ಪುಟಾಣಿ ಪ್ರತಿಕ್ರಿಯಿಸಿ, ಪಡಿತರ ಚೀಟಿದಾರರು ಕೈ ತೊಳೆಯಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಒಬ್ಬರು ಹೆಚ್ಚುವರಿ ಕೆಲಸಗಾರರನ್ನೂ ನೇಮಿಸಲಾಗಿದೆ. ಕರೊನಾ ವೈರಸ್ ಹರಡದಂತೆ ಇಲಾಖೆ ಕೈಗೊಂಡಿರುವ ಕ್ರಮಕ್ಕೆ ನಮ್ಮ ಸಹಕಾರವೂ ಮುಖ್ಯವಾಗಿದೆ ಎಂದರು.
ಹೋಟೆಲ್ಗಳು ಬಂದ್: ಪಟ್ಟಣದಲ್ಲಿ ಬುಧವಾರದಿಂದ ತಳ್ಳುಗಾಡಿಗಳು, ಯಗ್ರೈಸ್, ಕೋಳಿ, ಮೀನು, ಮಾಂಸ ಮಾರಾಟ ಮಾಡುವುದನ್ನು ಬಂದ್ ಮಾಡಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ಪುರಸಭೆ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ, ಸರ್ಕಾರದ ಆದೇಶ ಪಾಲನೆ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸೇರಿ ಎಲ್ಲ ಇಲಾಖೆಗಳಿಗೆ ಪೂರಕ ಸಹಕಾರ ನೀಡಲಾಗುತ್ತಿದೆ. ಪೌರ ಕಾರ್ವಿುಕರಿಗೆ ಮಾಸ್ಕ್, ಕೈಗವಸು ಸೇರಿ ರಕ್ಷಣಾ ವಸ್ತುಗಳನ್ನು ವಿತರಿಸಲಾಗಿದೆ. ಪುರಸಭೆ ವಾಹನದ ಮೂಲಕ ನಿತ್ಯ ಜಾಗೃತಿ ಮೂಡಿಸಲಾಗುತ್ತಿದೆ. ನಾಗರಿಕರೂ ಸಹ ಪಟ್ಟಣದ ಸ್ವಚ್ಛತೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತೆ
ರೋಣ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ಧರಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಅಲ್ಲದೆ, ಠಾಣೆಗೆ ಬರುವ ಸಾರ್ವಜನಿಕರು ಕೈಗಳನ್ನು ಶುಚಿಯಾಗಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಠಾಣೆಯ ಮುಂದೆ ನೀರು ಹಾಗೂ ಡೆಟಾಲ್ ಇಡಲಾಗಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಕೈ ತೊಳೆದುಕೊಂಡು ಠಾಣೆಗೆ ಬರುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ಪೊಲೀಸ್ ಅಧಿಕಾರಿಗಳು ನೀಡಿದ್ದಾರೆ.