

ಶ್ರೀರಂಗಪಟ್ಟಣ: ಪಟ್ಟಣದ ಟಿಎಪಿಸಿಎಂಎಸ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲ 12 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಚುನಾವಣೆ ನಡೆಯಿತು. ಬಿ ಕ್ಷೇತ್ರದ ಎಲ್ಲ 8 ಸ್ಥಾನಗಳಲ್ಲೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದರು. ಸಂಘದ ಷೇರುದಾರರ ಬಿ ಕ್ಷೇತ್ರದ ಒಟ್ಟು 3193 ಅರ್ಹ ಮತದಾರರಲ್ಲಿ 2 ಸಾಮಾನ್ಯ, 2 ಸಾಮಾನ್ಯ ಮಹಿಳೆ, ಬಿಸಿಎಂ-ಎ, ಬಿಸಿಎಂ-ಬಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸ್ಥಾನಗಳಿಗೆ ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಚುನಾವಣೆ ನಡೆಯಿತು. ಒಟ್ಟು 2716 ಮತಗಳು ಚಲಾವಣೆಗೊಂಡವು. ಕಾಂಗ್ರೆಸ್ ಪಕ್ಷದ ಬೆಂಬಲಿತರಾಗಿ ಸ್ಪರ್ಧಿಸಿದ್ದ ಎಂ.ನಂದೀಶ್ 1,191, ಬಿ.ಎಸ್.ಸಂದೇಶ್ 1,122, ಬಿ.ಎಸ್.ಚಂದ್ರಶೇಖರ್ 1,080, ಎಲ್.ನಾಗರಾಜು 1,007, ಶಿವಯ್ಯ 906, ನಾಗರಾಜು 809 , ಸುಚಿತ್ರಾ ಎಚ್.ಸಿ 939, ಪದ್ಮಮ್ಮ 899 ಮತಗಳನ್ನು ಪಡೆದು ಜಯಗಳಿಸಿದರು.
ಎ ಕ್ಷೇತ್ರದ ವಿಎಸ್‌ಎಸ್‌ಎನ್ ಸೊಸೈಟಿ ಕ್ಷೇತ್ರಗಳಿಂದ ಕೆ.ಜೆ ರವಿಶಂಕರ್ 16, ಟಿ.ಕೆ.ಯತೀಶ್ 13, ಎಸ್.ಜೆ.ವೆಂಕಟರಾಮು 13, ಹಾಗೂ ಎಸ್.ಎಂ.ನಾಗರಾಜು 13 ಮತಗಳನ್ನು ಪಡೆದು ಗೆದ್ದರು. ಜೆಡಿಎಸ್ ಪಕ್ಷದ ಬೆಂಬಲಿತರಾಗಿ ಸ್ಪರ್ಧಿಸಿದ್ದ ಎಸ್.ಅಶ್ವತ್ಥನಾರಾಯಣ 1,034, ಕೆ.ಎನ್.ರಾಮಚಂದ್ರ 952, ಜಿ.ಪಿ.ಲಕ್ಷ್ಮಣ 899, ಎಚ್.ಸಿ.ಲಕ್ಷ್ಮೀ ಪ್ರಸನ್ನ 948, ಶ್ರೀಕಂಠ 884, ಶಂಕರನಾಯಕ 721, ಎನ್.ಸರಸ್ವತಿ 894, ಸರಸ್ವತಿ 888 ಮತಗಳನ್ನು ಪಡೆದು ಪರಾಜಿತರಾದರು.
ಬಿಜೆಪಿ ಪಕ್ಷದ ಬೆಂಬಲಿತರಾಗಿ ಸ್ಪರ್ಧಿಸಿದ್ದ ಬಿ.ಸಿ.ಕೃಷ್ಣೇಗೌಡ 742, ಜಯಲಕ್ಷ್ಮೀ 500, ಎಂ.ಜೆ.ಪುಟ್ಟರಾಜು 688, ಪಿ.ಪ್ರಕಾಶ್(ಟೆಂಪೋ) 463, ಟಿ.ಮಹದೇವಸ್ವಾಮಿ 423, ರಮೇಶ್ 342, ರಾಜೇಶ್ವರಿ 526 ಮತಗಳನ್ನು ಪಡೆದು ತೀವ್ರ ಪೈಪೋಟಿ ನೀಡಿದರು.
ಫಲಿತಾಂಶ ಹೊರಬಿದ್ದ ಬಳಿಕ ಕಾಂಗ್ರೆಸ್ ಕಾರ್ಯಕರ್ತರು, ವಿಜೇತ ಅಭ್ಯರ್ಥಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ಪುರಸಭೆ ಅಧ್ಯಕ್ಷ ಎಂ.ಎಲ್.ದಿನೇಶ್ ಅವರೊಂದಿಗೆ ಕ್ಷೇತ್ರದ ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ವಿಜೇತ ಅಭ್ಯರ್ಥಿಗಳಿಗೆ ಶುಭ ಕೋರಿದರು.
ಬಳಿಕ ಮಾತನಾಡಿದ ಶಾಸಕರು, ಈ ಹಿಂದೆ ಕೆಲ ಕಾರಣಗಳಿಂದ ಕೈ ಬಿಟ್ಟು ಹೋಗಿದ್ದ ಆಡಳಿತದ ಚುಕ್ಕಾಣಿಯನ್ನು ಕ್ಷೇತ್ರದ ಮತಬಾಂಧವರು ಸಂಪೂರ್ಣ ಬಹುಮತದೊಂದಿಗೆ ಪಕ್ಷದ ತೆಕ್ಕೆಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಷೇರುದಾರರ ನಿರೀಕ್ಷೆಯಂತೆ ಟಿಎಪಿಸಿಎಂಎಸ್ ಸಂಸ್ಥೆಯನ್ನು ಇನ್ನು 2 ವರ್ಷಗಳಲ್ಲಿ ನೂತನ ಕಾಯಕಲ್ಪಗೊಳಿಸಿ ಮಾದರಿ ಸಂಸ್ಥೆಯಾಗಿ ಅಭಿವೃದ್ಧಿಪಡಿಸಲು ಶ್ರಮಿಸುತ್ತೇನೆ. ಇದಕ್ಕಾಗಿ ಬೆಂಬಲಿಸಿ, ದುಡಿದ ಎಲ್ಲ ಮತದಾರರು, ಬೆಂಬಲಿಗರು ಮತ್ತು ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಸಂಘದ ಹಾಲಿ ಅಧ್ಯಕ್ಷ ಹಾಗೂ ಚುನಾವಣೆಯಲ್ಲಿ ಅಧಿಕ ಮತಗಳಿಂದ ಜಯಗಳಿಸಿದ ಎಂ.ನಂದೀಶ್ ಮಾತನಾಡಿ, ನಾನು ಅಧ್ಯಕ್ಷನಾದ ಬಳಿಕ ಸಂಘದ ಅಭಿವೃದ್ಧಿಗೆ ಶಾಸಕರ ಸಹಕಾರ ಪಡೆದು ಶ್ರಮಿಸಲಾಗಿದೆ. ಸಂಘದಲ್ಲಿ ಬ್ಯಾಂಕ್ ತೆರೆದು ಷೇರುದಾರರಿಗೆ ಹಕ್ಕು ನೀಡಲಾಯಿತು. ಸ್ಥಗಿತಗೊಂಡಿದ್ದ ರಸಗೊಬ್ಬರ ಮಾರಾಟ ಮಳಿಗೆ ತೆರೆಯಲಾಯಿತು. ಸಂಘದ ಕಚೇರಿ ಆಸ್ತಿಯನ್ನು ಇ-ಸ್ವತ್ತು ಮಾಡಿಸುವ ಮೂಲಕ ಕೋಟ್ಯಂತರ ರೂ.ಮೌಲ್ಯದ ಆಸ್ತಿಯನ್ನು ಭದ್ರಪಡಿಸಲಾಗಿದೆ ಎಂದರು.
ಮನ್‌ಮುಲ್ ನಿರ್ದೇಶಕ ಬಿ.ಬೋರೇಗೌಡ, ಪುರಸಭಾ ಸದಸ್ಯ ಎಸ್.ಎನ್.ದಯಾನಂದ್, ಕಾಂಗ್ರೆಸ್ ಮುಖಂಡರಾದ ಎಂ.ಲೋಕೇಶ್, ಶಿವಮಲ್ಲು, ಟಿ.ಎಂ.ಹೊಸೂರು ಮಹಾದೇವು, ಸೋಮುಸುಂದರ್, ಸುರೇಶ್ ಇದ್ದರು. ತಹಸೀಲ್ದಾರ್ ಚೇತನಾ ಯಾದವ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಟಿಎಪಿಸಿಎಂಎಸ್ ಚುನಾವಣೆ ವೇಳೆ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಜೆಡಿಎಸ್ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ದಶರಥ ಸೇರಿದಂತೆ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬೆಳಗ್ಗಿನಿಂದ ಸಂಜೆವರೆಗೂ ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ರವೀಂದ್ರ ಶ್ರೀಕಂಠಯ್ಯ ಅವರ ನಡೆ ಕ್ಷೇತ್ರದ ಆಶ್ಚರ್ಯ ತಂದಿತ್ತಲ್ಲದೇ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಸೃಷ್ಟಿಸಿತ್ತು.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್, ಯುವ ಮುಖಂಡ ಎಸ್.ಸಚ್ಚಿದಾನಂದ, ಪಕ್ಷದ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ರೈತ ನಾಯಕ ಕೆ.ಎಸ್.ನಂಜುಂಡೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಶ್ರೀಧರ್, ಹಿರಿಯ ಮುಖಂಡ ಎಸ್.ಎಲ್.ಲಿಂಗರಾಜು ಮತಬೇಟೆಯಲ್ಲಿ ತೊಡಗಿದ್ದರು