ಕೈ ತುಷ್ಟೀಕರಣಕ್ಕೆ ರಾಜ್ಯ ಹಾಳು

24
Published on

ಬಿಜೆಪಿ ಜಿಲ್ಲಾ ಟಕದ ಪ್ರತಿಭಟನೆಯಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಟೀಕೆ

ತುಮಕೂರು: ರೈತರ, ದೇವಾಲಯಗಳ, ಮಠಮಾನ್ಯಗಳ, ಸರ್ಕಾರಿ ಶಾಲೆಗಳ, ಸಾರ್ವಜನಿಕರ ಆಸ್ತಿಗೆ ವಕ್ಫ್​ ನೋಟಿಸ್​ ನೀಡಿರುವುದನ್ನು ಖಂಡಿಸಿ ಹಾಗೂ ವಕ್ಫ್​ ಮಂಡಳಿ ರದ್ದುಪಡಿಸುವಂತೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಟಕದ ನೇತೃತ್ವದಲ್ಲಿ ಶನಿವಾರ ನಗರದಲ್ಲಿ ನಮ್ಮ ಭೂಮಿ- ನಮ್ಮ ಹಕ್ಕು ಹೆಸರಿನ ಹೋರಾಟ ನಡೆಸಲಾಯಿತು.

ನಗರದ ಟೌನ್​ ಹಾಲ್​ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಟಕದ ನೇತೃತ್ವದಲ್ಲಿ ಹಿಂದುಗಳ ಜಮೀನನ್ನು ವಕ್ಫ್​ಗೆ ಪರಭಾರೆ ಮಾಡುವ ಪ್ರಯತ್ನ ನಡೆದಿದೆ. ವಕ್ಫ್​ ಮಂಡಳಿಯನ್ನು ರದ್ದುಪಡಿಸುವಂತೆ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಮಾತನಾಡಿ, ಕಾಂಗ್ರೆಸ್​ ಸರ್ಕಾರ ಅಲ್ಪಂಸಂಖ್ಯಾತರ ತುಷ್ಟೀಕರಣ ಮಾಡುವ ಮೂಲಕ ಗೊಂದಲ ಮೂಡಿಸುತ್ತಿದೆ. ರೈತರ ಜಮೀನು, ದೇವಸ್ಥಾನ, ಮಠಮಾನ್ಯಗಳ ಜಾಗ, ಸಾರ್ವಜನಿಕ ಆಸ್ತಿಯನ್ನು ವಕ್ಫ್​ಗೆ ನೀಡುವ

ಸಂಚು ನಡೆದಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರದ ಅಭಿವೃದ್ಧಿ ಶೂನ್ಯ ಎಂಬುದು ಜನಸಾಮಾನ್ಯರಿಗು ಗೊತ್ತಾಗಿದೆ. ಸರ್ಕಾರದಲ್ಲಿ ಯವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲವೆಂದು ಕಾಂಗ್ರೆಸ್​ ಶಾಸಕರೇ ಅಸಮಾಧಾನಗೊಂಡಿದ್ದಾರೆ. ಕೇವಲ ವೋಟಿಗಾಗಿ ಯಾರನ್ನೋ ತುಷ್ಟೀಕರಣ ಮಾಡಿಕೊಂಡು ರಾಜ್ಯ ಹಾಳು ಮಾಡುತ್ತಿದ್ದಾರೆ. ಯಾವುದೋ ಸಮುದಾಯದ ಓಲೈಕೆಗಾಗಿ ದೇಶದ ಭದ್ರತೆ ಹಾಳು ಮಾಡಿ ದೇಶವನ್ನು ಒತ್ತೆ ಇಡಲು ಹೊರಟಿದ್ದಾರೆ ಎಂದು ಹರಿಹಾಯ್ದರು.

ಕಾಂಗ್ರೆಸ್​ ಸರ್ಕಾರದ ಕುಮ್ಮಕ್ಕಿನಿಂದ ರಾಜ್ಯದ ಹಿಂದುಗಳ ಆಸ್ತಿ ಮೇಲೆ ವಕ್ಫ್​ ಕಣ್ಣು ಹಾಕಿದೆ. ಇದರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತಿದೆ. ಸಾರ್ವಜನಿಕರ, ರೈತರ ಹಿತಾಸಕ್ತಿ ಮರೆತು ಸರ್ಕಾರ ಒಂದು ಸಮುದಾಯದ ಪರ ಹೊರಟಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​ ಟೀಕಿಸಿದರು.

ಮಾಜಿ ಶಾಸಕ ಎಂ.ಡಿ.ಲಕ್ಷಿ$್ಮನಾರಾಯಣ ಮಾತನಾಡಿ, ಸಂವಿಧಾನಕ್ಕೆ ಅಪಚಾರ ಮಾಡಿ ಕಾಂಗ್ರೆಸ್​ ನಾಯಕರು ವಕ್ಫ್​ ಬೆಂಬಲಿಸುತ್ತಿದ್ದಾರೆ. ಸರ್ಕಾರ ವಕ್ಫ್​ ಮಂಡಳಿ ರದ್ದು ಮಾಡಬೇಕು. ರೈತರ, ಮಠಮಾನ್ಯಗಳ ಜಮೀನು ಉಳಿಸಿಕೊಡಬೇಕು ಎಂದು ಒತ್ತಾಯಿಸಿದರು.

ಲೋಕಸಭೆಯಲ್ಲಿ ವಕ್ಫ್​ ಮಸೂದೆ ಮಂಡನೆಗೆ ಬಿಜೆಪಿಯ ಬೆಂಬಲವಿದೆ. ವಕ್ಫ್​ ವಿರುದ್ಧ ಬಿಜೆಪಿಯ ಹೋರಾಟ ನಿಲ್ಲುವುದಿಲ್ಲ ಎಂದು ರಾಜ್ಯ ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ್​ ಬಿದರೆ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಎಸ್​.ಶಿವಪ್ರಸಾದ್​, ಎಸ್​.ಡಿ. ದಿಲೀಪ್​ಕುಮಾರ್​, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗಂಗರಾಜು, ಸಂದೀಪ್​ಗೌಡ, ಕಾರ್ಯದರ್ಶಿ ಎಚ್​.ಎಂ.ರವೀಶಯ್ಯ, ನಗರಾಧ್ಯಕ್ಷ ಟಿ.ಎಚ್​.ಹನುಮಂತರಾಜು, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಆಂಜನಪ್ಪ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಎಚ್​.ನವಚೇತನ್​, ಮುಖಂಡರಾದ ಬಿ.ಎಸ್​.ನಾಗೇಶ್​, ಭೈರಣ್ಣ, ಸತ್ಯಮಂಗಲ ಜಗದೀಶ್​, ಜ್ಯೋತಿ ತಿಪ್ಪೇಸ್ವಾಮಿ, ಮಾಜಿ ಕಾಪೋರ್ರೇಟರ್​ಗಳಾದ ಬಿ.ಜಿ.ಕೃಷ್ಣಪ್ಪ, ಸಿ.ಎನ್​.ರಮೇಶ್​, ಮಲ್ಲಿಕಾರ್ಜುನಯ್ಯ, ಮುಖಂಡರಾದ ಮಹೇಶ್​ಬಾಬು, ಮಂಜುನಾಥ್​, ಪ್ರೇಮಾ ಹೆಗಡೆ ಮತ್ತಿತರರು ಭಾಗವಹಿಸಿದ್ದರು.

ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿರುವ ರಾಜ್ಯ ಸರ್ಕಾರ ಅನರ್ಹರಿಗೆ ಪಡಿತರ ಚೀಟಿ ನೀಡಿ ನಿಜವಾದ ಬಡವರ ಪಡಿತರ ಕಾರ್ಡ್​ಗಳನ್ನು ರದ್ದು ಮಾಡಿದೆ. ಸೃಷ್ಟಿಸಿರುವ ವಕ್ಫ್​ ಸಮಸ್ಯೆಯನ್ನು ಬಗೆಹರಿಸಬೇಕು. ತುಮಕೂರು ಜಿಲ್ಲೆಯಲ್ಲೇ 300ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ.| ಎಚ್​.ಎಸ್​.ರವಿಶಂಕರ್​ ಬಿಜೆಪಿ ಜಿಲ್ಲಾಧ್ಯಕ್ಷಜನರ ಕಣ್ಣು ಒರೆಸಬೇಕಾದ ಸರ್ಕಾರ ಜನರ ನೆಮ್ಮದಿ ಹಾಳು ಮಾಡುತ್ತಿದೆ. ರೈತರನ್ನು ಬೀದಿಗೆ ತರಲು ಹುನ್ನಾರ ಮಾಡುತ್ತಿದೆ. ಅಧಿಕಾರಕ್ಕಾಗಿ ಅರೆಬೆಂದ ಯೋಜನೆಗಳನ್ನು ತಂದಿದೆ. |  ಅಂಬಿಕಾ ಹುಲಿನಾಯ್ಕರ್​ ರಾಜ್ಯಬಿಜೆಪಿ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net