ಅರಕಲಗೂಡು: ಪಟ್ಟಣದ ಬಿಇಒ ಕಚೇರಿಯಲ್ಲಿ ಇಬ್ಬರು ಅಧಿಕಾರಿಗಳು ಕೈ ಕೈ ಮಿಲಾಯಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಪರಸ್ಪರ ದೂರು ನೀಡಿದ್ದು, ಎರಡೂ ಪ್ರಕರಣಗಳು ದಾಖಲಾಗಿವೆ.
ಬಿಇಒ ಕಚೇರಿ ಬಳಿ ಇರುವ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಿಗೆ ಶನಿವಾರ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಲೆಕ್ಕದ ಸಮಸ್ಯೆಯೊಂದಕ್ಕೆ ಸಂಬಂಧಿಸಿದಂತೆ ಅಕ್ಷರ ದಾಸೋಹ ಅಧಿಕಾರಿ ಎಸ್.ಎನ್ ಶಿವಕುಮಾರ್ ಮತ್ತು ಇಸಿಒ ಗಿರಿಜಾನಂದ ಮುಂಬಳೆ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿತ್ತು.
ಕೆಲ ಸಮಯದ ಬಳಿಕ ಬಿಇಒ ಕಚೇರಿ ಬಳಿ ಮತ್ತೆ ಪರಸ್ಪರರು ಕೈಕೈ ಮಿಲಾಯಿಸಿಕೊಂಡಿದ್ದು, ಇಬ್ಬರೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಬಿಇಒ ದೇವರಾಜ್ ಇಬ್ಬರೂ ಅಧಿಕಾರಿಗಳ ನಡುವೆ ಸಂಧಾನ ಯತ್ನ ನಡೆಸಿದ್ದರು. ಆದರೆ ನಂತರದ ಬೆಳವಣಿಗೆಯಲ್ಲಿ ಇಬ್ಬರೂ ಪರಸ್ಪರ ಪೊಲೀಸರಿಗೆ ದೂರು ನೀಡಿದ್ದು, ಎರಡೂ ಪ್ರಕರಣಗಳು ದಾಖಲಾಗಿವೆ.