ಕೈ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

26 TMK_PAGE_3 Lead
ಕೈ ಅಭ್ಯರ್ಥಿಗಳು
Published on

ತುಮಕೂರು: ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಹಳೆಯ ಮುಖಗಳಿಗೆ ಮಣೆಹಾಕಲಾಗಿದೆ.
ನಿರೀಕ್ಷೆಯಂತೆಯೇ ಕೊರಟಗೆರೆಯಿಂದ ಡಾ.ಜಿ.ಪರಮೇಶ್ವರ್, ಪಾವಗಡದಿಂದ ಸ್ಪರ್ಧೆಗೆ ಹಿಂದೇಟು ಹಾಕಿದ್ದ ಹಾಲಿ ಶಾಸಕ ವೆಂಕಟರವಣಪ್ಪ ಬದಲು ಅವರ ಪುತ್ರ ಎಚ್.ವಿ.ವೆಂಕಟೇಶ್‌ಗೆ ಟಿಕೆಟ್ ಘೋಷಿಸಲಾಗಿದೆ. 2013ರಲ್ಲಿ ವೆಂಕಟೇಶ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಹಿರಿಯ ಮುಖಂಡ ಟಿ.ಬಿ.ಜಯಚಂದ್ರ ಶಿರಾ ಕ್ಷೇತ್ರದಲ್ಲಿ ಮತ್ತೊಮ್ಮೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಮಧುಗಿರಿಯಲ್ಲಿ ಕೆ.ಎನ್.ರಾಜಣ್ಣ, ತಿಪಟೂರು ಕೆ.ಷಡಕ್ಷರಿ, ತುರುವೇಕೆರೆ ಬೆಮೆಲ್ ಕಾಂತರಾಜು, ಕುಣಿಗಲ್ನಿಂದ ಡಾ.ಎಚ್.ಡಿ.ರಂಗನಾಥ್ ಜತೆಗೆ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ತೊರೆದು ಪಕ್ಷ ಸೇರ್ಪಡೆಯಾಗಿರುವ ಕೆ.ಎಸ್.ಕಿರಣ್‌ಕುಮಾರ್‌ಗೆ ಮಣೆ ಹಾಕಲಾಗಿದೆ.
ತುಮಕೂರು ನಗರ, ತುಮಕೂರು ಗ್ರಾಮಾಂತರ ಹಾಗೂ ಗುಬ್ಬಿ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಮೊದಲ ಪಟ್ಟಿಯಲ್ಲಿಲ್ಲ. ಹಾಗಾಗಿ, ಎರಡನೇ ಪಟ್ಟಿಯಲ್ಲಿ ಘೋಷಿಸುವ ಸಾಧ್ಯತೆ ಇದೆ. ಶಾಸಕ ಎಸ್.ಆರ್.ಶ್ರೀನಿವಾಸ್ ಬಸವ ಜಯಂತಿಗೆ ಕಾಂಗ್ರೆಸ್ ಸೇರಲಿದ್ದು, ಆನಂತರ ಟಿಕೆಟ್ ಘೋಷಣೆಯಾಗಲಿದೆ.
ಘೋಷಣೆಯಾಗಿರುವ 8 ಕ್ಷೇತ್ರಗಳ ಪೈಕಿ ಎಸ್ಸಿ ಮೀಸಲು ಕ್ಷೇತ್ರಗಳಲ್ಲಿ 2 ದಲಿತ ಸಮುದಾಯ, ಒಂದು ಪರಿಶಿಷ್ಟ ಪಂಗಡ, ಮೂವರು ಒಕ್ಕಲಿಗ ಹಾಗೂ ಇಬ್ಬರು ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡಲಾಗಿದೆ. ಗುಬ್ಬಿ ಹಾಗೂ ತುಮಕೂರು ಗ್ರಾಮಾಂತರದಲ್ಲಿಯೂ ಒಕ್ಕಲಿಗರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದ್ದು ಸಂಖ್ಯೆ ಐದಕ್ಕೇರಬಹುದು.
ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಜಿಲ್ಲೆಯ 11 ಕ್ಷೇತ್ರಗಳ ಪೈಕಿ 5ರಲ್ಲಿ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಒಂದು ಟಿಕೆಟ್ ಕೂಡ ಒಬಿಸಿಗೆ ಕೊಡಿಸಲು ಸಾಧ್ಯವಾಗಿಲ್ಲ.


‘ಸಾಮಾಜಿಕ ನ್ಯಾಯ’ ಮರೆತ ಕೈ ಪಡೆ?
ಟಿಕೆಟ್ ಘೋಷಣೆ ನಂತರ ಕಾಂಗ್ರೆಸ್ ಸದಾ ಪ್ರಸ್ತಾಪಿಸುವ ಸಾಮಾಜಿಕ ನ್ಯಾಯದ ಅನುಷ್ಠಾನದ ಬಗ್ಗೆ ಜಿಲ್ಲೆಯಲ್ಲಿ ರಾಜಕೀಯ ಚರ್ಚೆ ಆರಂಭವಾಗಿದೆ. ಮೊದಲ ಪಟ್ಟಿಯಲ್ಲಿ ಘೋಷಣೆಯಾಗಿರುವ 8 ಕ್ಷೇತ್ರಗಳಲ್ಲಿ ಮಾದಿಗ ಹಾಗೂ ಹಿಂದುಳಿದ ವರ್ಗಕ್ಕೆ ಒಂದೂ ಟಿಕೆಟ್ ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ತುಮಕೂರು ಹಾಗೂ ಚಿತ್ರದುರ್ಗ ಭಾಗದಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿರುವ ಕಾಡುಗೊಲ್ಲರು ಹಾಗೂ ಮಾದಿಗ ಸಮುದಾಯಕ್ಕೆ ಟಿಕೆಟ್ ಸಿಗುವ ಭರವಸೆ ನೀಡಲಾಗಿತ್ತು. ಆದರೆ, ಶಿರಾ ಹಾಗೂ ಪಾವಗಡದಲ್ಲಿ ಇವರೆಗೂ ಸಮುದಾಯಕ್ಕೆ ಮನ್ನಣೆ ನೀಡದಿರುವ ಬಗ್ಗೆ ಪಕ್ಷದೊಳಗೆ ಅಸಮದಾನಕ್ಕೆ ಕಾರಣವಾಗಿದೆ. ಮಹಿಳೆಯರಿಗೂ ಜಿಲ್ಲೆಯಲ್ಲಿ ಆದ್ಯತೆ ನೀಡಿಲ್ಲ.

ಒಂದಾದ ಹಿರಿಯ ಮುಖಂಡರು!
ಕಳೆದ ನಾಲ್ಕು ದಶಕಗಳಿಂದಲೂ ಜಿಲ್ಲೆಯ ರಾಜಕಾರಣದಲ್ಲಿ ಮುಂಚೂಣಿಯಲ್ಲಿರುವ ಕಾಂಗ್ರೆಸನ್ನು ಹಿರಿಯ ನಾಯಕರೆಲ್ಲಾ ಒಂದಾಗಿ ಟಿಕೆಟ್ ಪಡೆಯುವಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ತಿಪಟೂರು ಕ್ಷೇತ್ರದಿಂದ ಟೂಡಾ ಶಶಿಧರ್, ಶಿರಾದಿಂದ ಡಾ.ಸಾಸಲು ಸತೀಶ್‌ಗೆ ಟಿಕೆಟ್ ಸಿಗುವ ಬಗ್ಗೆ ಗುಸು ಗುಸು ಕೇಳಿ ಬಂದಿತ್ತು. ಆದರೆ, ಜಿಲ್ಲೆಯ ಪಾಲಿಗೆ ಹೈಕಮಾಂಡ್ ಎನಿಸಿರುವ ಪರಮೇಶ್ವರ್ ಹಿರಿಯರ ಪರ ಬ್ಯಾಟಿಂಗ್ ಮಾಡಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಮಾಜಿ ಶಾಸಕ ಆರ್.ನಾರಾಯಣ್ ಅಥವಾ ಎಚ್.ನಿಂಗಪ್ಪ ಕಣಕ್ಕಿಳಿದರೂ ಅಚ್ಚರಿಪಡುವಂತಿಲ್ಲ, ಇವರಿಬ್ಬರೂ ಟಿಕೆಟ್ ಬೇಡವೆಂದರಷ್ಟೇ ಸೂರ್ಯಮುಕುಂದರಾಜ್‌ಗೆ ಅವಕಾಶ ಎಂಬ ಮಾತು ಕಾಂಗ್ರೆಸ್ ಪಾಳಯದಲ್ಲಿದೆ.

ಆತಂಕದಲ್ಲಿ ಡಾ.ರಫೀಕ್ ಅಹ್ಮದ್
ಜಿಲ್ಲೆಯಲ್ಲಿ ಮಾಜಿ ಶಾಸಕರೆಲ್ಲಾ ಯಾವುದೇ ಪ್ರತಿರೋಧವಿಲ್ಲದೆ ಟಿಕೆಟ್ ಪಡೆದಿರುವ ನಡುವೆಯೇ ತುಮಕೂರು ನಗರ ಕ್ಷೇತ್ರದಿಂದ ಡಾ.ರಫೀಕ್ ಅಹ್ಮದ್‌ಗೆ ಮೊದಲ ಪಟ್ಟಿಯಲ್ಲಿ ಸ್ಥಾನ ನೀಡದಿರುವುದು ಊಹಾಪೋಹಗಳಿಗೆ ಕಾರಣವಾಗಿದೆ. ತುಮಕೂರು ನಗರ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನೇ ಕಾಂಗ್ರೆಸ್ ಕಣಕ್ಕಿಳಿಸುವುದು ಖಚಿತವಾಗಿದ್ದು, ಆರಂಭದಲ್ಲಿ ಸ್ಪರ್ಧೆಗೆ ಹಿಂದೇಟು ಹಾಕಿದ್ದು, ಡಾ.ರಫೀಕ್‌ಗೆ ಈಗ ಟಿಕೆಟ್ ನೀಡಲು ಅಡ್ಡಿಯಾಗಿದೆ ಎನ್ನಲಾಗಿದೆ. ಮತ್ತೊಬ್ಬ ಪ್ರಬಲ ಆಕಾಂಕ್ಷಿ ಇಕ್ಬಾಲ್ ಅಹ್ಮದ್ ಹೆಸರು ಕೂಡ ಕೇಳಿಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net