ಕೈ ಅಧಿಕಾರಕ್ಕೆ ಬಂದಾಗಲೆಲ್ಲ ರೈತರ ಕೈ ಬರಿದು

Every time the hands come to power, the hands of the farmers are empty
ಸಿಂದಗಿ ತಾಲೂಕು ಆಡಳಿತ ಕಚೇರಿಯಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿದರು. ಮಲ್ಲಿಕಾರ್ಜುನ ಜೋಗೂರ, ಯಶವಂತ್ರಾಯಗೌಡ ರೂಗಿ, ಈರಣ್ಣ ರಾವೂರ, ಗುರು ತಳವಾರ, ಶಿವಕುಮಾರ ಬಿರಾದಾರ ಸೇರಿದಂತೆ ಕಾರ್ಯಕರ್ತರಿದ್ದರು.
Published on

ಸಿಂದಗಿ: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ರೈತ ವಿರೋಧಿ ನೀತಿ ಖಂಡಿಸಿ, ಶುಕ್ರವಾರ ಮಾಜಿ ಶಾಸಕ ರಮೇಶ ಭೂಸನೂರ ನೇತೃತ್ವದಲ್ಲಿ ತಾಲೂಕು ಬಿಜೆಪಿ ಮಂಡಲ ಹಾಗೂ ರೈತ ಮೋರ್ಚಾದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲವೂ ಮಳೆ ಅಭಾವ, ಬರ ರೈತರನ್ನು ಕಾಡುತ್ತ ಅವರ ಕೈ ಬರಿಗೈನಂತಾಗುತ್ತದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಸರ್ಕಾರವಿದ್ದಾಗ ಜಾರಿಗೆ ಬಂದ ರೈತ ವಿದ್ಯಾನಿಧಿ, ಭೂಸಿರಿ, ಶ್ರಮಶಕ್ತಿ, ರೈತ ಸಂಪದ, ಗೋಶಾಲೆ ಸೇರಿದಂತೆ ಇತರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಕೈಬಿಡುವ ಮೂಲಕ ರೈತ ಹಾಗೂ ಜನ ವಿರೋಧಿತನವನ್ನು ಮುಂದುವರಿಸಿದೆ. ಕಾವೇರಿ ಹೋರಾಟ, ಕುಡಿಯುವ ನೀರು, ರಸ್ತೆ, ಅಂಗನವಾಡಿ ಕಟ್ಟಡ, ಶಾಲೆ, ಕಿಸಾನ್ ಸಮ್ಮಾನ ಸೇರಿದಂತೆ ಯಾವುದನ್ನೂ ನಿರ್ವಹಿಸದೇ, ಕೃಷಿಕ್ಷೇತ್ರವನ್ನೇ ನಿರ್ಲಕ್ಷಿಸಲಾಗುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ರೈತರ ವಿದ್ಯುತ್ ಸಮಸ್ಯೆ ಸರಿದೂಗಿಸಿದ್ದ ಬಿಜೆಪಿ ಸರ್ಕಾರ, ಹಿಂದೆ ದಿನಕ್ಕೆ 7ತಾಸು ವಿದ್ಯುತ್ ನೀಡುತ್ತಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಈಗ ಕೇವಲ 2 ತಾಸು ವಿದ್ಯುತ್ ನೀಡುವುದಲ್ಲದೇ, ಲೋಡ್ ಶೆಡ್ಡಿಂಗ್ ಬೇರೆ ಮಾಡುವ ಬಗ್ಗೆ ತನ್ನ ಅಸಹಾಯಕತೆಯನ್ನು ಪ್ರದರ್ಶಿಸುತ್ತಿದೆ. ಸಮಯಕ್ಕೆ ಸರಿಯಾಗಿ ರೈತರು ಬೆಳೆದ ಬೆಳೆಗೆ ನೀರು ಕೊಡಲಾಗದೇ ಪರದಾಡುತ್ತಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ವರದಿಯಾಗಿರುವುದು ಆತಂಕದ ಸಂಗತಿ. ಕೂಡಲೇ ಸರ್ಕಾರ ತಮ್ಮ ರೈತ ವಿರೋಧಿ ನಿಲುವನ್ನು ನಿಲ್ಲಿಸಿ, ಹಗಲಿನಲ್ಲಿ 7 ತಾಸು ವಿದ್ಯುತ್, ಬರಗಾಲ ನಿವಾರಣೆಗೆ ಕ್ರಮ, ರೈತರ ಆತ್ಮಹತ್ಯೆಯಂತಹ ಅನಾಹುತಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ರೈತ ವರ್ಗಕ್ಕೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಲ್ಲಿಕಾರ್ಜುನ ಜೋಗೂರ, ಯಶವಂತ್ರಾಯಗೌಡ ರೂಗಿ, ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಗುರು ತಳವಾರ, ಶಿವಕುಮಾರ ಬಿರಾದಾರ, ಬಸಯ್ಯ ಹಿರೇಮಠ, ಶ್ಯಾಮಲಾ ಮಂದೇವಾಲಿ, ಅನುಸೂಯಾ ಪಾರಗೊಂಡ, ನೀಲಮ್ಮ ಯಡ್ರಾಮಿ, ಸಾಯಬಣ್ಣ ಪುರದಾಳ, ಚೇತನ ರಾಂಪೂರ, ಪರಶುರಾಮ ಗುಳ್ಳೂರ ಹಾಗೂ ರೈತ ಮೋರ್ಚಾದ ನಾಯಕರು ಹಾಗೂ ಕಾರ್ಯಕರ್ತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net