ಕೇಸ್ ವಜಾಗೊಳಿಸಿ, ಎಸ್‌ಐ ಬಂಧಿಸಲು ದಸಂಸ ಆಗ್ರಹ

IMG-20230116-WA0053.jpg
Published on

ದಾವಣಗೆರೆ: ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಆಗ್ರಹಿಸಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ದಲಿತ ಹೋರಾಟಗಾರರ ಮೇಲೆ ಹಾಕಿರುವ ಮೊಕದ್ದಮೆ ವಜಾಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ ಒತ್ತಾಯಿಸಿದರು.

ಹೋರಾಟಗಾರರ ಮೇಲೆ ಸುಳ್ಳು ದೂರು ನೀಡಿರುವ ಕೆಟಿಜೆ ನಗರ ಠಾಣೆ ಸಬ್ ಇನ್ಸ್‌ಪೆಕ್ಟರ್ ಮತ್ತು ಇತರರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಇಡೀ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ದಲಿತರು ನ್ಯಾಯ ಕೇಳಬಾರದೆ, ನ್ಯಾಯ ಕೇಳಿದ್ದಕ್ಕೆ ಕೇಸು ದಾಖಲಿಸುವ ಮೂಲಕ ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ. ಕಾನೂನು ಸಚಿವರ ಪ್ರತಿಕೃತಿ ದಹನ ಮಾಡಿದ ದಲಿತರ ಮೇಲೆ ಕೇಸು ಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಒಂದು ವಾರದೊಳಗಾಗಿ ಹೋರಾಟಗಾರರ ಮೇಲಿನ ಕೇಸ್ ವಜಾಗೊಳಿಸಿ ಪೊಲೀಸ್ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳದಿದ್ದರೆ ಐಜಿಪಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರದೀಪ್ ಕೆಟಿಜೆ ನಗರ, ಅಣಜಿ ಹನುಮಂತಪ್ಪ, ಬೆನಕನಹಳ್ಳಿ ಪರಮೇಶ್, ಚಿತ್ರಲಿಂಗಪ್ಪ, ಚಂದ್ರಪ್ಪ, ಗುಮ್ಮನೂರು ಹನುಮಂತಪ್ಪ ಇದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net