ವಿಜಯವಾಣಿ ಸುದ್ದಿಜಾಲ
ಕೋಲಾರ
ನನಗೆ ಗೊತ್ತಿರೋದು ಬಿಳಿ ರಕ್ತಕಣ ಹಾಗೂ ಕೆಂಪು ರಕ್ತಕಣ ಮಾತ್ರ. ಕೇಸರಿ ರಕ್ತದ ಕಣ ಗೊತ್ತಿಲ್ಲ.ಸಂಸದ ಡಿ.ಕೆ. ಸುರೇಶ್‍ಗೆ ಬಯಾಲಜಿ ಪುಸ್ತಕ ಕೊಡಿಸುತ್ತೇನೆ, ನೋಡಿಕೊಳ್ಳಲಿ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಟಾಂಗ್ ನೀಡಿದ್ದಾರೆ.
ಆಗ್ನೇಯ ಪದವೀಧರ ಕ್ಷೇತ್ರಕ್ಕೆ ನಡೆದ ಚುನಾವಣೆ ಸಂಬಂಧ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮತಗಟ್ಟೆ ಬಳಿ ಆಗಮಿಸಿದ ಸಂದರ್ಭದಲ್ಲಿ ಆರ್.ಆರ್. ನಗರ ಉಪ ಚುನಾವಣೆ ಕಣದಲ್ಲಿ ಸಂಸದ ಸುರೇಶ್ ನೀಡಿರುವ ಕೇಸರಿ ರಕ್ತ ಕುರಿತ ಹೇಳಿಕೆಗೆ ಪ್ರತಿಕ್ರೀಯಿಸಿದರು.
ಬಿಜೆಪಿ ಅಭ್ಯರ್ಥಿ ಮುನಿರತ್ನಂ ಅವರನ್ನು ಆಧುನಿಕ ದುಷ್ಯಾಸನ ಎಂದಿರುವ ಕಾಂಗ್ರೆಸ್ಸಿಗರ ಟೀಕೆಗೆ ಪ್ರತಿಕ್ರೀಯಿಸಲು ನಿರಾಕರಿಸಿದ ಸಚಿವ ಸುಧಾಕರ್, ವಿಷಯಾಧಾರಿತ ಚರ್ಚೆ ಬಿಟ್ಟು ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ.ನಾನು ಮೊದಲಿನಿಂದಲೂ ವೈಯಕ್ತಿಕ ಟೀಕೆಗಳಿಗೆ ಉತ್ತರಿಸುವುದಿಲ್ಲ ಎಂದರು.
ಮಾಸ್ಕ್ ಧರಿಸಿದರೆ ತಪ್ಪೇನಿಲ್ಲ
ಒಬ್ಬರೇ ಕಾರಿನಲ್ಲಿ ಹೋಗುವಾಗ ಮಾಸ್ಕ್ ಕಡ್ಡಾಯವಲ್ಲ, ಆದರೆ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಮಾಸ್ಕ್ ಹಾಕಿಕೊಳ್ಳಬೇಕೆಂಬುದು ತಜ್ಞರ ಅಭಿಪ್ರಾಯವಾಗಿದೆ. ಕರೊನಾ ವಾರಿಯರ್ಸ್‍ಗಳಾದ ವೈದ್ಯ ಸಿಬ್ಬಂದಿಗಳು ನಿತ್ಯ ಸುಮಾರು 8 ಗಂಟೆಗಳ ಕಾಲ ಪಿಪಿಇ ಕಿಟ್‍ಗಳನ್ನು ಹಾಕಿಕೊಂಡು ಕೆಲಸ ಮಾಡುವಾಗ ನಾವು ಮಾಸ್ಕ್ ಹಾಕುವುದರಲ್ಲಿ ತಪ್ಪಿಲ್ಲ ಎಂದು ಅಭಿಪ್ರಾಯಿಸಿದರು.