

ಕಲಬುರಗಿ: ಜೇವರ್ಗಿ ರಸ್ತೆಯಲ್ಲಿನ ಕೇಸರಿ ಬೆಟ್ಟದ ಶ್ರೀ ಸಾಂಬಶಿವಯೋಗಿಶ್ವರ ಹಿರೇಮಠದಲ್ಲಿ ಆ.೫ರಿಂದ ಸೆ.೩ರ ವರೆಗೆ ಶ್ರಾವಣ ಮಾಸ ಪ್ರಯುಕ್ತ ಬಾಲತಪಸ್ವಿ ಶ್ರೀ ದ್ವಿತೀಯ ಸಾಂಬಶಿವಾಚಾರ್ಯರ ತಪೋನುಷ್ಠಾನ, ಪ್ರತಿ ಸೋಮವಾರ ಇಷ್ಟಲಿಂಗ ಮಹಾಪೂಜೆ ಹಾಗೂ ತುಲಾಭಾರ ಸೇವೆ ನಡೆಯಲಿದೆ ಎಂದು ಸಾಂಬಸೇನಾ ಜಿಲ್ಲಾಧ್ಯಕ್ಷ ಶರಣಗೌಡ ಪಾಟೀಲ್ ತಿಳಿಸಿದರು.
ಶ್ರಾವಣ ಮಾಸದ ನಿಮಿತ್ತ ೩೦ ವರ್ಷದಿಂದ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಡಲಾಗುತ್ತಿದೆ. ಪ್ರಸಕ್ತ ವರ್ಷವೂ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಸೇರಿ ವಿವಿಧ ಕಾರ್ಯಕ್ರಮ ನಡೆಯಲಿವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿ ವರ್ಷದಂತೆ ಪ್ರಸಕ್ತ ವರ್ಷ ಶ್ರಾವಣದ ನಡುವಿನ ಸೋಮವಾರ ಮಹಾರಾಷ್ಟçದ ನಿಟ್ಟೂರದಿಂದ ಐದಾರು ಸಾವಿರ ಜನರು ಕಲಬುರಗಿ ಮಾರ್ಗವಾಗಿ ಕೇಸರಿ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಆಗಮಿಸಲಿದ್ದಾರೆ. ಲೋಕಕಲ್ಯಾಣಾರ್ಥ ಪೂಜ್ಯರು ಇಷ್ಟಲಿಂಗ ಮಹಾಪೂಜೆ ನಡೆಸುತ್ತಿದ್ದು, ಕೇಸರಿ ಬೆಟ್ಟದಲ್ಲಿ ವಿಶೇಷ ಪೂಜೆ, ಪೂಜ್ಯರ ಆಶೀರ್ವಚನ, ಪ್ರಸಾದ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು. ಸಾಂಬಸಲಗರ, ಬೆಳಮಗಿ, ಅಟ್ಟೂರ, ಫರಹತಾಬಾದ್, ಕರಹರಿ, ಕಮಲಾನಗರ, ಇಟಗಾ ಸೇರಿ ಸುತ್ತಲಿನ ಗ್ರಾಮಸ್ಥರು ಇಷ್ಟಲಿಂಗ ಮಹಾಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಪಾಲಾಕ್ಷಯ್ಯ ಹಿರೇಮಠ, ಬಸವರಾಜ ಪಾಟೀಲ್, ಶಾಂತವೀರ ಪಾಟೀಲ್ ಇತರರಿದ್ದರು.