ಕೇಸರಿ ಬಣ್ಣವನ್ನಿಟ್ಟುಕೊಂಡೇ ರಾಜಕಾರಣ ಮಾಡುತ್ತೇವೆ

15 KADURU web
Published on

ಕಡೂರು: ಕೆಲವರಿಗೆ ಕೇಸರಿ ಬಣ್ಣ ಕಂಡರೆ ಆಗುವುದಿಲ್ಲ, ಉರಿದು ಬೀಳುತ್ತಾರೆ. ನಾವು ಕೇಸರಿ ಬಣ್ಣವನ್ನಿಟ್ಟುಕೊಂಡೇ ರಾಜಕಾರಣ ಮಾಡುತ್ತೇವೆ. ಧಮ್ ಇದ್ದರೆ ಎದುರಿಸಿ ಎಂದು ಕಾಂಗ್ರೆಸ್​ಗೆ ಸಿಎಂ ಬಸವರಾಜ ಬೊಮ್ಮಾಯಿ ಸವಾಲು ಹಾಕಿದರು.

ಮಂಗಳವಾರ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ಒಂದು ವರ್ಗ-ಜಾತಿಗೆ ಸೀಮಿತ ಎನ್ನುವಂತೆ ಬಿಂಬಿಸುವ ಪ್ರಯತ್ನ ಕಾಂಗ್ರೆಸ್​ನಿಂದ ನಡೆದಿದೆ. ಆದರೆ ಜಾತಿ ಆಧಾರಿತವಾಗಿ ಯೋಜನೆಗಳನ್ನು ರೂಪಿಸಿ ಜಾತಿಭೇದ ಎಣಿಸಿದ್ದು ಯಾರು? ಈ ಹಿಂದೆ ಅಹಿಂದ ಮಂತ್ರ ಜಪಿಸಿ ಅಧಿಕಾರ ಹಿಡಿಯಲು ಯಶಸ್ವಿಯಾದರೂ ಅಹಿಂದ ವರ್ಗಕ್ಕೆ ನಿಮ್ಮ ಕೊಡುಗೆ ಏನು? ಎಂದು ಸವಾಲು ಹಾಕಿದರು. ಹೆಸರು ಮಾತ್ರ ಅಹಿಂದ. ಆದರೆ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಮೇಲೆ ಬರಲೇ ಇಲ್ಲ. ಮೇಲೆ ಬಂದಿದ್ದು ನೀವು ಮಾತ್ರ ಎಂದು ಕುಟುಕಿದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ನಾನು ಸಿಎಂ ಆಗಿದ್ದ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳನ್ನು ನೆನಪಿಸಿದರು. ಕರೊನಾ ಕಾಲದಲ್ಲಿ ಸ್ಪಂದಿಸಿದ ರೀತಿ, ಕೆರೆ ಪುನಶ್ಚೇತನ ಯೋಜನೆ, ನೇಕಾರರು, ಮೀನುಗಾರರ ಸಾಲ ಮನ್ನಾ, ಬಾಲಸೇವಾ ಯೋಜನೆ, ಭಾಗ್ಯಲಕ್ಷ್ಮೀ ಯೋಜನೆ, ಹೈನುಗಾರಿಕೆಗೆ ಉತ್ತೇಜನ ನೀಡಲು ಪೋತ್ಸಾಹ ಧನ ಮುಂತಾದ ಯೋಜನೆಗಳನ್ನು ಪ್ರಸ್ತಾಪಿಸಿದರು. ಕುಂತಲ್ಲಿ ನಿಂತಲ್ಲಿ ಈ ಬಗ್ಗೆ ಮಾತನಾಡಿ ಎಂದು ಮನವಿ ಮಾಡಿದರು.

ಸಂಕಲ್ಪ ಯಾತ್ರೆ ವೇಳೆ ಎಲ್ಲೆಡೆ ಜನಸಾಗರ ರೀತಿಯಲ್ಲಿ ಸೇರುತ್ತಿರುವುದನ್ನು ಗಮನಿಸಿದರೆ 140ರಿಂದ 145 ಸ್ಥಾನಗಳಲ್ಲಿ ಗೆದ್ದು ಮತ್ತೆ ಅಧಿಕಾರ ಹಿಡಿಯುವುದರಲ್ಲಿ ಸಂದೇಹವಿಲ್ಲ. ನೆಮ್ಮದಿ, ಗೌರವ ಮತ್ತು ಸ್ವಾಭಿಮಾನದ ಬದುಕು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ಶಾಶ್ವತ ಬರಪೀಡಿತ ತಾಲೂಕು ಎಂಬ ಹಣೆಪಟ್ಟಿ ಹೊಂದಿದ್ದ ಕಡೂರು ಇಂದು ನೀರಾವರಿ ಯೋಜನೆಯನ್ನು ಕಾಣುತ್ತಿದೆ. ಬೆಳ್ಳಿ ಪ್ರಕಾಶ್ ಈ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net