ಕೇಸರಿ ಪಡೆಗಿದೆ ಸ್ತ್ರೀ ಶಕ್ತಿ ಸಮರ್ಥನೆ

mahila morcha samavesh
Published on

ಬೀದರ್: ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹಿಳೆಯರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ನೀಡಿದೆ. ಈ ಚುನಾವಣೆಯಲ್ಲಿ ಬಿಜೆಪಿಗೆ ಸ್ತ್ರೀ ಶಕ್ತಿ ಸಾಥ್ ನೀಡಿ ಮತ್ತೆ ಅಕಾರಕ್ಕೆ ತರಲಿದೆ ಎಂದು ಚಲನಚಿತ್ರ ನಟಿ, ನಿರ್ದೇಶಕಿ ರೂಪಾ ಅಯ್ಯರ್ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ಬೆಲ್ದಾಳೆ ಫಂಕ್ಶನ್ ಹಾಲ್ ನಲ್ಲಿ ಆಯೋಜಿಸಿದ ಮಹಿಳಾ ಮೋರ್ಚಾ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರ ಸಮಗ್ರ ವಿಕಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಶ್ರಮಿಸುತ್ತಿದ್ದಾರೆ. ಹೀಗಾಗಿ ಮನೆ ಜವಾಬ್ದಾರಿ ಜತೆಗೆ ಬಾಹ್ಯಾಕಾಶ ಸಹಿತ ಎಲ್ಲೆಡೆ ಸಾಧನೆ ಮಾಡುತ್ತಿರುವ ಮಹಿಳೆಯರು ಹೆಮ್ಮೆಯಿಂದ ಸಂತಸದ ಬದುಕು ನಡೆಸುತ್ತಿದ್ದಾರೆ ಎಂದರು.

ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿರುವೆ. ಎಲ್ಲೆಡೆ ಪಕ್ಷದ ಪರ ವಾತಾವರಣವಿದೆ. ಪೂರ್ಣ ಬಹುಮತದೊಂದಿಗೆ ಅಕಾರಕ್ಕೆ ಬರುವುದು ಖಚಿತ. ಮಹಿಳಾ ಸಮುದಾಯ ಕೇಸರಿ ಪಕ್ಷಕ್ಕೆ ಬೆಂಬಲಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಚನ್ನಮ್ಮ ಪಾಟೀಲ್, ಮಹಾರಾಷ್ಟ್ರದ ಮಹಿಳಾ ಮೋರ್ಚಾ ಕಾರ್ಯದರ್ಶಿ ಉತ್ತರಾ ಕಲಬುರಗಿ, ಬಿಡಿಎ ಅಧ್ಯಕ್ಷ ಬಾಬು ವಾಲಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರಹಂತ ಸಾವಳೆ, ಪ್ರಮುಖರಾದ ಶಕುಂತಲಾ ಬೆಲ್ದಾಳೆ, ಲತಾ ಹಾರಕೂಡೆ, ಶೋಭಾ ತೇಲಂಗ, ಸಂಗೀತಾ, ರೂಪವತಿ ಜಾಧವ್, ಪ್ರಸನ್ನಲಕ್ಷ್ಮೀ ದೇಶಪಾಂಡೆ, ಶಶಿ ಹೊಸಳ್ಳಿ, ರಾಜೇಂದ್ರ ಪೂಜಾರಿ ಇತರರಿದ್ದರು. ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಲುಂಬುಣಿ ಗೌತಮ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿಜಯಲಕ್ಷ್ಮೀ ಕೌಟಗೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net