

ಚಿಕ್ಕೋಡಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಡಾ. ಕೇಶವ ಬಲಿರಾಮ ಹೆಡಗೆವಾರ ಚಿಕ್ಕೋಡಿಗೆ ಭೇಟಿ ನೀಡಿದ್ದ ಜಾಗದಲ್ಲಿ ಕೇಶವ ಸ್ಮೃತಿ ಟ್ರಸ್ಟ್ ತಲೆ ಎತ್ತಿ ನಿಂತಿದೆ ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಇಲ್ಲಿನ ಕೇಶವ ಕಲಾಭವನದಲ್ಲಿ ಕೇಶವ ಸ್ಮೃತಿ ಟ್ರಸ್ಟ್ ಭಾನುವಾರ ಆಯೋಜಿಸಿದ್ದ ಹಿತೈಸಿಗಳ ಸಮಾವೇಶ ಹಾಗೂ ಸ್ವರ ಸಂಗಾತಿ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಂಘದ ಸ್ವಯಂ ಸೇವಕರು ಸಮಾಜದಲ್ಲಿ ನೊಂದ, ಬಡ ಹಾಗೂ ಪ್ರತಿಭಾವಂತ ಮಕ್ಕಳಿಗಾಗಿ ಕೆಲಸ ಮಾಡುತ್ತಾರೆ ಎಂದರು.
ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ರಾಷ್ಟ್ರೀಯ ಸ್ವಯಂ ಸಂಘ ದೇಶದುದ್ದಕ್ಕೂ ಸೇವೆ ವಿಸ್ತರಿಸಿದ್ದು, ಜನರಿಗೆ ಸಹಾಯ ಮಾಡುವುದೆ ಉದ್ದೇಶವಾಗಿದೆ ಎಂದರು.
ಟ್ರಸ್ಟ್ ಕಾರ್ಯದರ್ಶಿ ಸಂಜಯ ಅಡಕೆ ಮಾತನಾಡಿ, ಹೆಡಗೆವಾರ ಹೆಸರಿನಲ್ಲಿ ಕೇಶವ ಸ್ಮೃತಿ ಟ್ರಸ್ಟ್ ಮೂಲಕ ಚಿಕ್ಕೋಡಿ ಹಾಗೂ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಸಹಿತ ವಸತಿ ನಿಲಯ ಒದಗಿಸಿ ಶಿಕ್ಷಣ ನೀಡಲಾಗುತ್ತಿದೆ. ೨ ಆಂಬುಲೆನ್ಸ್ ಮೂಲಕ ರೋಗಿಗಳಿಗೆ ಉಚಿತ ಸೇವೆ ನೀಡಲಾಗುತ್ತಿದೆ ಎಂದರು.
ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಚುನಮರಿ, ಖಜಾಂಚಿ ಪ್ರಕಾಶ ಅನ್ವೇಕರ, ವಿಶ್ವಸ್ಥರಾದ ಧನ್ಯಕುಮಾರ ಗುಂಡೆ, ಸುರೇಶ ಕೌಜಲಗಿ, ಶಿವಪುತ್ರಪ್ಪ ಜತ್ತಿ, ವಿನಾಯಕ ಚಿಪ್ಪಲಕಟ್ಟಿ, ವಿಜಯ ಮಾಂಜರೇಕರ, ಡಾ.ಎಸ್.ಡಿ.ಬಾಗೇವಾಡಿ, ಸ್ವಯಂ ಸೇವಕರು, ಸೇವಕಿಯರು ಉಪಸ್ಥಿತರಿದ್ದರು.