ಕೇಶ ಮಂಡನ ಮಾಡಿಸಿಕೊಳ್ಳುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ

YADGIRI 02
Published on

ಯಾದಗಿರಿ:ಎಪಿಎಂಸಿ ಹಾಗೂ ಭೂಸುಧಾರಣಾ ಕಾಯ್ದೆ ವಿರೋಧಿಸಿ ಸೋಮವಾರ ಜಿಲ್ಲೆಯ ಸರ್ವ ಸಂಘಟನೆಗಳ ಹೋರಾಟ ಸಮಿತಿಯಿಂದ ಕರೆ ನೀಡಿದ್ದ ಯಾದಗಿರಿ ಬಂದ್ಗೆ ಜಿಲ್ಲೆಯ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಗ್ಗೆ ಜಿಲ್ಲೆಯಲ್ಲಿ ಎಂದಿನಂತೆ ತರಕಾರಿ ಮಾರಾಟ, ಕಿರಣಾ ಅಂಗಡಿ ಸೇರಿದಂತೆ ವ್ಯಾಪಾರಸ್ಥರು ತಮ್ಮ ಮಳಿಗೆಗಳನ್ನು ತೆರೆದು ವಹಿವಾಟಿಗೆ ಅಣಿಯಾದರು. ಆದರೆ 10 ಗಂಟೆ ಸುಮಾರಿಗೆ ಹೋರಾಟಗಾರರು ವ್ಯಾಪಾರಸ್ಥರಲ್ಲಿ ಬಂದ್ಗೆ ಸಹಕಾರ ನೀಡುವಂತೆ ಮನವಿ ಮಾಡಿಕೊಂಡ ಕಾರಣ ಪ್ರಮುಖ ಬೀದಿಗಳಲ್ಲಿನ ಎಲ್ಲ ಅಂಗಡಿಗಳು ಬಂದ್ ಮಾಡಲಾಯಿತು.

ಆಟೊರಿಕ್ಷಾ ಹಾಗೂ ಖಾಸಗಿ ವಾಹನಗಳ ಓಡಾಟ ಎಂದಿನಂತೆ ಕಂಡು ಬಂದರೆ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು, ರಾಷ್ಟ್ರೀಕೃತ ಬ್ಯಾಂಕ್ಗಳು ಕಾರ್ಯ ನಿರ್ವಹಿಸಿದವು. ನಗರದ ಮೈಲಾಪುರ ಬೇಸ್ನಿಂದ ಆರಂಭಗೊಂಡ ಪ್ರತಿಭಟನಾ ರ್ಯಾಲಿ , ಗಾಂಧಿವೃತ್ತ, ಕನಕವೃತ್ತ, ಡಾ.ಅಂಬೇಡ್ಕರ್ ವೃತ್ತ, ಶಾಸ್ತ್ರೀ ವೃತ್ತದ ಮೂಲಕ ಸುಭಾಷ್ ವೃತ್ತಕ್ಕೆ ಆಗಮಿಸಿತು. ಸುಮಾರು 30ಕ್ಕೂ ಹೆಚ್ಚು ಸಂಘಟನೆಗಳ ಮುಖ್ಯಸ್ಥರು ಹೋರಾಟದಲ್ಲಿ ಪಾಲ್ಗೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರದ ಆಡಳಿತ ವಿರೋಧಿ ನೀತಿಯನ್ನು ಖಂಡಿಸಿದರು.

ಶಹಾಪುರದಲ್ಲಿ ಕೆಲ ರೈತ ಸಂಘಟನೆ ಮುಖಂಡರು ಇಲ್ಲಿನ ಬಸವೇಶ್ವರ ವೃತ್ತದ ಬಳಿ ಕೇಶ ಮಂಡನ ಮಾಡಿಸಿಕೊಳ್ಳುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನು ಕೆಲವರು ದೀಡ್ ನಮಸ್ಕಾರ ಹಾಕುವ ಮೂಲಕ ಈ ತಿದ್ದುಪಡಿ ರೈತರಿಗೆ ಉರುಳಾಗಿ ಪರಿಣಮಿಸಲಿದೆ ಎಂದು ಸರ್ಕಾರದ ಗಮನ ಸೆಳೆಯಲು ಯತ್ನಿಸಿದ್ದು ವಿಶೇಷ ಎನಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net