ಕೇವಲ ವಿದ್ಯಾವಂತನಾದರೆ ಸಾಲದು ವಿನಯವಂತನಾಗಬೇಕು:ಡಾ.ಎಚ್.ಎಲ್.ಮಲ್ಲೇಶ್‌ಗೌಡ

ಕೇವಲ ವಿದ್ಯಾವಂತನಾದರೆ ಸಾಲದು ವಿನಯವಂತನಾಗಬೇಕು:ಡಾ.ಎಚ್.ಎಲ್.ಮಲ್ಲೇಶ್‌ಗೌಡ
Published on

ಚನ್ನರಾಯಪಟ್ಟಣ: ಕೇವಲ ವಿದ್ಯಾವಂತನಾದರೆ ಸಾಲದು ವಿನಯವಂತನಾಗಬೇಕು ಎಂದು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ್‌ಗೌಡ ಹೇಳಿದರು.


ತಾಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ 91 ನೇ ಬೃಹತ್ ದನಗಳ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಶನಿವಾರ ರಾತ್ರಿ ಆಯೋಜಿಸಿದ್ದ ಬಿಜಿಎಸ್ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ತಂದೆ-ತಾಯಿ ಹಾಗೂ ಗುರು-ಹಿರಿಯರಿಗೆ ಗೌರವ ತೋರದಿದ್ದಲ್ಲಿ ಕಲಿತ ವಿದ್ಯೆಯೂ ವ್ಯರ್ಥವಾಗಲಿದೆ. ಶಿಕ್ಷಣ ಕಲಿತರಷ್ಟೇ ಪ್ರಪಂಚಕ್ಕೆ ಉತ್ತಮ ಕೊಡುಗೆಯ ಬದುಕು ನೀಡಲು ಸಾಧ್ಯವಿಲ್ಲ ಅಪಾರ ಜ್ಞಾನ ಸಂಪಾದನೆಯು ಮುಖ್ಯವಾಗಲಿದೆ ಎಂದರು.


ವೈದ್ಯ, ಇಂಜಿನಿಯರ್ ಹಾಗೂ ಇನ್ನಿತರೆ ಉನ್ನತ ಹುದ್ದೆಗಳನ್ನು ಬಯಸುವ ಬದಲು ಪಾಲಕರು ತಮ್ಮ ಮಕ್ಕಳ ಉತ್ತಮ ಭವಿಷ್ಯದ ಬಗ್ಗೆ ಚಿಂತನೆ ಮಾಡುವುದು ಅಗತ್ಯ. ಸಂಸ್ಕಾರ ಕಲಿಯದೆ ಹೊರತು ಶಿಕ್ಷಣ ಮಾತ್ರ ಪಡೆದರೆ ಮೌಲ್ಯಯುತ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಕಿವಿಮಾತು ಹೇಳಿದರು.


ಶಿಕ್ಷಣದ ಜತೆಗೆ ಸಾಮಾನ್ಯ ಜ್ಞಾನ ಮುಖ್ಯ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಮೌಲ್ಯಯುತ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಸಿಗಬೇಕಿದೆ. ಗರ್ಭದೊಳಗೆ ಇರುವಾಗಲೇ ತಾಯಿ ತನ್ನ ಮಗುವಿಗೆ ಜಗತ್ತಿನಲ್ಲಿ ಬದುಕಲು ಅಗತ್ಯವಿರುವಷ್ಟು ಜ್ಞಾನದ ಬೆಳಕನ್ನು ತುಂಬಿರುತ್ತಾಳೆ. ಆ ಜ್ಞಾನದ ಬೆಳಕು ಬದುಕಿನ ದಾರಿದೀಪವಾಗಲಿದೆ ಎಂದು ತಿಳಿಸಿದರು.


ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀ ಶಂಭುನಾಥಸ್ವಾಮೀಜಿ ಮಾತನಾಡಿ, ಜನ್ಮ ಪಡೆದು ಬರುವ ಯಾರೊಬ್ಬರೂ ಸಹ ಈ ಜಗತ್ತಿನಲ್ಲಿ ಶಾಶ್ವತವಾಗಿ ನಿಲ್ಲಲಾರರು. ಆದರೂ ಹಣ-ಆಸ್ತಿ ಗಳಿಕೆಯ ಜತೆ ಮತ್ತೇನೋ ಪಡೆವ ಆಸೆ, ತಮ್ಮ ಸ್ವಾರ್ಥಕ್ಕಾಗಿ ಬೇರೇನೊ ಸೃಷ್ಠಿಸುವ ಹಂಬಲ, ಅಷ್ಟರಲ್ಲಿ ಸಮಯ ಸಮೀಪಿಸಿದ್ದು ಯಾವುದೋ ಒಂದು ನೆಪದಲ್ಲಿ ಸರಿದು ಕಣ್ಮರೆಯಾಗುವುದೇ ಒಂದು ನೆನಪುಳಿಯುವ ಬದುಕಲ್ಲ ಎಂದರು.


ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಅಪಾರವಾದ ಜ್ಞಾನ ಸಂಪತ್ತು ಸಿಕ್ಕಿದರೂ ಸಹ ಎಲ್ಲವನ್ನೂ ಸಾಧಿಸಲಾಗುವುದಿಲ್ಲ. ಯಾಕೆಂದರೆ ಮನೆಯಲ್ಲಿ ಪಾಲಕರ ನಡೆ-ನುಡಿ ಹಾಗೂ ಮೌಲ್ಯಯುತವಾದ ಧೈನಂದಿಕ ಜೀವನವು ಸಹ ಮಕ್ಕಳ ಬದುಕಿಗೆ ದಾರಿ ದೀಪವಾಗಲಿದೆ. ಇಲ್ಲಿ ಅಗತ್ಯ ಶಿಕ್ಷಣದ ಜತೆಗೆ ಸದ್ಮಾರ್ಗದಲ್ಲಿ ನಡೆದರೆ ಮಾತ್ರ ಸಾಧನೆ ನಮ್ಮ ಸ್ವತ್ತಾಗಲು ಸಾಧ್ಯ ಎಂದು ಆಶಿರ್ವಚನ ನೀಡಿದರು.


ಬಳಿಕ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಕ್ಷೇತ್ರ ಕಬ್ಬಳಿ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಜೆ.ಸೋಮನಾಥ್, ಕಸಾಪ ಜಿಲ್ಲಾ ಕಾರ್ಯದರ್ಶಿ ಬೊಮ್ಮೇಗೌಡ, ಶಾಲಾ ಮುಖ್ಯಶಿಕ್ಷಕ ಟಿ.ತಿಮ್ಮೇಗೌಡ, ಶಿಕ್ಷಕವೃಂದ ಹಾಗೂ ಪಾಲಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net