ಕೇಳೊರಿಲ್ಲ ಎಂಡೊಸಲ್ಫಾನ್‌ ಪೀಡಿತರ ಗೋಳು

Untitled
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ಎಂಡೊಸಲ್ಫಾನ್‌ ಪೀಡಿತರಿಗೆ ಉಚ್ಚ ನ್ಯಾಯಾಲಯದ ಸೂಚನೆಯ ನಂತರವೂ ಸರ್ಕಾರ ಅಗತ್ಯ ಸೌಲಭ್ಯ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಇದುವರೆಗೂ ಎಂಡೊಸಲ್ಫಾನ್‌ ಪೀಡಿತರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಆದರೆ, 2015 ರಲ್ಲಿ ಉತ್ತರ ಕನ್ನಡದಲ್ಲಿ
ಎಂಡೊಸಲ್ಫಾನ್‌ ಪೀಡಿತರನ್ನು ಗುರುತಿಸುವ ಕಾರ್ಯ ನಡೆಯಿತು. ಅದೇ ಪಟ್ಟಿಯನ್ನು ಇಟ್ಟುಕೊಂಡು ಇಂದಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಆಗ ಸಮೀಕ್ಷೆಯಲ್ಲಿ ಬಿಟ್ಟು ಹೋದ ಇನ್ನೂ ಸಾಕಷ್ಟು ಜನರಿದ್ದು, ಅವರನ್ನೂ ಮರು ಸರ್ವೇ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಜಿಲ್ಲೆಯಲ್ಲಿ 13-14 ನೇ ಸಾಲಿನಿಂದ ಸರ್ವೇ ಕಾರ್ಯ ಕೈಗೊಂಡು 2015 ರಲ್ಲಿ ಮುಗಿಸಲಾಗಿತ್ತು. ಅದರಲ್ಲಿ ಸದ್ಯ 1686 ಜನರನ್ನು ಜಿಲ್ಲೆಯ ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ ತಾಲೂಕುಗಳಲ್ಲಿ ಗುರುತಿಸಲಾಗಿದೆ. ಅದರಲ್ಲಿ 174 ಜನ ಮೃತಪಟ್ಟಿದ್ದಾರೆ. ಜಿಲ್ಲೆಯ ಒಟ್ಟಾರೆ ಎಂಡೊ ಪೀಡಿತರ ಪೈಕಿ ಶೇ.3 ರಿಂದ 4 ರಷ್ಟು ಜನ ಮಾತ್ರ ಗುರುತಿಸಲಾಗಿದೆ ಎಂಬುದು ಜಿಲ್ಲೆಯ ಅಂಗವಿಕಲರ ಪುನಶ್ಚೇತನ ಕಾರ್ಯಕರ್ತರ ಅಭಿಪ್ರಾಯ.
ಆರೋಗ್ಯ ಘಟಕ ಬಂದ್:
ಜಿಲ್ಲೆಯಲ್ಲಿ ಎಂಡೊ ಪೀಡಿತರಿಗಾಗಿ ಸಂಚಾರಿ ಆರೋಗ್ಯ ಘಟಕಗಳನ್ನು ಪ್ರಾರಂಭಿಸಲಾಗಿತ್ತು. ಸಂಚಾರಿ ಆಸ್ಪತ್ರೆಗಳ ಮೂಲಕ ಪೀಡಿತರ ಮನೆಗಳಿಗೆ ತೆರಳಿ ತಪಾಸಣೆ ಮಾಡಿ ಔಷಧ ನೀಡಲಾಗುತ್ತಿತ್ತು. ಈಗ ಒಂದು ವರ್ಷದಿಂದ ಘಟಕಗಳು ಬಂದಾಗಿವೆ. ಸರ್ಕಾರದಿಂದ ನೇರವಾಗಿ ತಪಾಸಣೆ ಹಾಗೂ ಔಷಧ ನೀಡುವ ಕಾರ್ಯವಾಗುತ್ತಿದೆ. ಆದರೆ, ನಿಯಮಿತವಾಗಿ ತಪಾಸಣೆ ಮಾಡಲಾಗುತ್ತಿಲ್ಲ. ಔಷಧಗಳು ಗುಣಮಟ್ಟದಿಂದ ಕೂಡಿಲ್ಲ ಎನ್ನುತ್ತಾರೆ ಎಂಡೊ ಪೀಡಿತ ನಾಗೇಶ ನಾಯ್ಕ.
ಮಾಸಾಶನದಲ್ಲಿ ವ್ಯತ್ಯಾಸ:
ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಎಂಡೊ ಪೀಡಿತರ ಚಿಕಿತ್ಸೆಗಾಗಿ ಪುನರ್ವಸತಿ ಕೇಂದ್ರಕ್ಕೆ ಜಾಗ ಗುರುತಿಸಿ 1೦ ಕೋಟಿ ರೂ. ಅನುದಾನ ನೀಡಲಾಗಿದೆ. ಉತ್ತರ ಕನ್ನಡದಲ್ಲಿ ಇದುವರೆಗೂ ಜಾಗ ಗುರುತಿಸುವ ಕಾರ್ಯವಾಗಿಲ್ಲ. ಮಾಸಾಶನದಲ್ಲೂ ವ್ಯತ್ಯಾಸವಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 58 ವರ್ಷ ಮೇಲ್ಪಟ್ಟ ಎಂಡೊ ಪೀಡಿತರಿಗೆ ಮಾಸಿಕ 4 ಸಾವಿರ ರೂ. ಮಾಸಾಶನ ನೀಡಲಾಗುತ್ತಿದೆ. ಆದರೆ, ಉತ್ತರ ಕನ್ನಡದಲ್ಲಿ ಆ ಮಿತಿಯನ್ನು 61 ವರ್ಷಕ್ಕೆ ನಿಗದಿ ಮಾಡಲಾಗಿದೆ. ಒಂದೇ ರಾಜ್ಯದಲ್ಲಿ ಈ ರೀತಿಯ ತಾರತಮ್ಯವೇಕೆ ಎಂಬುದು ಎಂಡೊ ಪೀಡಿತರ ಪ್ರಶ್ನೆಯಾಗಿದೆ. ಜಿಲ್ಲೆಯಲ್ಲಿ ಸದ್ಯ ಶೇ. 25 ಕ್ಕಿಂತ ಕಡಿಮೆ ಅಂಗವೈಕಲ್ಯವಿರುವ 29 ಜನ, ಶೇ. 25 ರಿಂದ 59 ರಷ್ಟು ಅಂಗವೈಕಲ್ಯವಿರುವ 679 ಜನ, ಶೇ.60 ಕ್ಕಿಂತ ಹೆಚ್ಚು ಅಂಗವೈಕಲ್ಯವಿರುವ 978 ಜನ ಎಂಡೊಸಲ್ಫಾನ್‌ ಪೀಡಿತರಿದ್ದಾರೆ.
ಪ್ರತ್ಯೇಕ ವೈದ್ಯರನ್ನು ಒದಗಿಸಿ
ಎಂಡೊಸಲ್ಫಾನ್‌ ಪೀಡಿತರಿಗೆ ಸೂಕ್ತ ಸೌಲಭ್ಯ ಒದಗಿಸಬೇಕು ಎಂದು ಜಿಲ್ಲಾ ಮಟ್ಟದ ಸಮಗ್ರ ವಿಕಲ ಚೇತನರ ವಿಆರ್‌ಡಬ್ಲು, ಯುಆರ್‌ಡಬ್ಲು, ಹಾಗೂ ಎಂಆರ್‌ಡಬ್ಲು ನೌಕರರ ಒಕ್ಕೂಟದ ಉತ್ತರ ಕನ್ನಡ ಜಿಲ್ಲಾ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಡಿಎಚ್‌ಒ ಕಚೇರಿಗೆ ಬುಧವಾರ ಭೇಟಿ ನೀಡಿ ಮನವಿ ಸಲ್ಲಿಸಿದ್ದಾರೆ. ಎಂಡೊಸಲ್ಫಾನ್‌ ಪೀಡಿತರ ಮೇಲುಸ್ತುವಾರಿಗಾಗಿ ಒಬ್ಬ ಪ್ರತ್ಯೇಕ ವೈದ್ಯರನ್ನು ನೇಮಕ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸಂಘಟನೆಯ ನಾಗೇಶ ನಾಯ್ಕ, ಗಣಪತಿ ಶೆಟ್ಟಿ, ಗಣೇಶ ಹೆಗಡೆ, ಉಮೇಶ ನಾಯ್ಕ, ಆನಂದು ಪಡ್ತಿ, ಸಾಯಿನಾಥ ಪಡುವಳಕರ್, ಕೋಮಲ ಗೌಡ, ಅಶೋಕ ಕುಡ್ತಲಕರ್, ಪ್ರಮಿಳಾ ಆರ್.ನಾಯ್ಕ, ಶ್ವೇತಾ ಎಂ.ಗೌಡ ಉಪಸ್ಥಿತರಿದ್ದರು.


ಜಿಲ್ಲೆಯಲ್ಲಿ ಎಂಡೊಸಲ್ಫಾನ್‌ ಪೀಡಿತರಿಗೆ ಬೇಕಾಗಿರುವ ಔಷಧಗಳನ್ನು ಒದಗಿಸಲಾಗುತ್ತಿದೆ. ಒಂದು ವರ್ಷದಿಂದ ಬಂದಾಗಿರುವ ಸಂಚಾರಿ ಆರೋಗ್ಯ ಘಟಕ ಪುನರಾರಂಭಿಸಲು ಜಿಲ್ಲೆಗೆ ಆಗಮಿಸಿದ ಆರೋಗ್ಯ ಸಚಿವರಿಗೆ ಮನವಿ ಮಾಡಲಾಗಿದೆ. ಸದ್ಯ ಸರ್ಕಾರ ಎಂಡೊ ಪೀಡಿತರಿಗೆ ಸೌಲಭ್ಯ ನೀಡುವ ಸಂಬಂಧ ಮೂರು ಜಿಲ್ಲೆಗಳಿಗೆ ಏಕರೂಪದ ಕಾರ್ಯನಿರ್ವಹಣಾ ವಿಧಾನ ಘೋಷಿಸಲಿದೆ ಎಂದು ತಿಳಿಸಿದೆ. ಸರ್ಕಾರದ ಸೂಚನೆಯಂತೆ ಕಾರ್ಯನಿರ್ವಹಿಸಲಾಗುವುದು.
ಡಾ.ಶರದ್ ನಾಯಕ
ಡಿಎಚ್‌ಒ, ಕಾರವಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net