

ಚಾಮರಾಜನಗರ: ತಂಬೂರಿಯ ತಂತಿ ಮೀಟುತ್ತಾ, ದೇವರ ಕಥೆಯನ್ನು ಹಾಡುವ ಜಾನಪದ ಕಲಾವಿದ ಕೆಬ್ಬೇಪುರ ಸಿದ್ದರಾಜು ಕೇಳುಗರ ಮನ ಗೆಲ್ಲುವ ದೇಸಿ ಪ್ರತಿಭೆ.
2024ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವ ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಪುರದ ಸಿದ್ದರಾಜು ಮೌಖಿಕ ಪರಂಪರೆಯ ಕೊಂಡಿಯಾಗಿದ್ದಾರೆ. ಮೂರನೇ ತರಗತಿವರೆಗೆ ಮಾತ್ರ ಓದಿರುವ ಸಿದ್ದರಾಜುಗೆ ತಂದೆ ರಾಚಯ್ಯ ಕಲೆಯನ್ನು ಧಾರೆ ಎರೆದರು. ರಕ್ತಗತವಾಗಿ ಬಳುವಳಿಯಾಗಿ ಬಂದಿರುವ ಕಲೆಯ ಸೇವೆಯನ್ನು ಸಿದ್ದರಾಜು ಮುಂದುವರೆಸಿಕೊಂಡು ಬಂದಿದ್ದಾರೆ. ಬಡತನದಲ್ಲಿ ಅರಳಿದ ಪ್ರತಿಭೆಯಾಗಿದ್ದರೂ ಕಲೆಯಲ್ಲಿ ಶ್ರೀಮಂತಿಕೆಯನ್ನು ಹೊಂದಿದ್ದಾರೆ.
ತಂಬೂರಿ ಮತ್ತು ಕಥೆ: ಕೆಬ್ಬೇಪುರ ಸಿದ್ದರಾಜು ತಂಬೂರಿ ತಂತಿ ಮೀಟುತ್ತಾ, ಮಂಟೇಸ್ವಾಮಿ, ಮಲೆ ಮಹದೇಶ್ವರರು, ಬಿಳಿಗಿರಿರಂಗನಾಥಸ್ವಾಮಿ, ನಂಜುಂಡೇಶ್ವರ ಸ್ವಾಮಿ, ಬಾಲನಾಗಮ್ಮ, ಮೈದಾಳ ರಾಮ, ನಿಂಗರಾಜುಮ್ಮ, ಪಿರಿಯಾಪಟ್ಟಣ ಕಾಳಗ, ಅಯ್ಯಪ್ಪಸ್ವಾಮಿ ಇನ್ನಿತರೆ ಕಥೆಗಳನ್ನು ಸಿದ್ದರಾಜು ಹಾಡುತ್ತಾರೆ. ಗಾಯನಕ್ಕೆ ತಕ್ಕಂತೆ ತಂಬೂರಿ ನುಡಿಸುತ್ತಾ ಕೇಳುಗರ ಗಮನ ಸೆಳೆಯುತ್ತಾರೆ. ಕಥೆಯನ್ನು ಹಾಡಲು ಶುರು ಮಾಡಿದರೆ ಹಗಲು-ರಾತ್ರಿ ಎನ್ನುವುದನ್ನೇ ನೋಡುವುದಿಲ್ಲ. ಕೇವಲ ಮೂರನೇ ತರಗತಿವರೆಗೆ ಮಾತ್ರ ಓದಿರುವ ಸಿದ್ದರಾಜು ಇಷ್ಟೊಂದು ಕಥೆಗಳನ್ನು ಹಾಡುವಾಗ ಯಾವುದೇ ಪುಸ್ತಕಗಳನ್ನು ನೋಡುವುದಿಲ್ಲ. ತಂದೆ ರಾಚಯ್ಯ ಅವರಿಂದ ಕಲಿತ ಜಾನಪದ ಕಲೆಯನ್ನು ನೆನಪಿನಲ್ಲಿ ಇಟ್ಟುಕೊಂಡು ಹಾಡುತ್ತಾರೆ. ಇದರಲ್ಲಿ ಜಾನಪದ ಕಲಾವಿದರ ಮೌಖಿಕ ಜ್ಞಾನದ ನೈಜ ವೈಭವ ಕಾಣುತ್ತದೆ. ಸ್ವಂತ ಸಾಹಿತ್ಯದಲ್ಲಿ ಭಕ್ತಿ ಗೀತೆಗಳನ್ನು ಹಾಡಿದ್ದಾರೆ. ಧ್ವನಿ ಸುರಳಿ ಮಾಡಿದ್ದಾರೆ. ಇವರು ಹಾಡುವ ಮಂಟೆಸ್ವಾಮಿ ಕಾವ್ಯವನ್ನು ಪಿ.ನಾಗರತ್ನಮ್ಮ ಪುಸ್ತಕ ರೂಪಕ್ಕೆ ತಂದಿದ್ದಾರೆ. ಜನಪದ ಗೀತೆಗಳ ಗಾಯಕದ ಧ್ವನಿ ಸುರುಳಿಯನ್ನು ಹೊರತಂದಿದ್ದಾರೆ. ರೈತರ ಕುರಿತು ಜನಪದ ಗೀತೆಗಳು, ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಕುರಿತು ಗೀತೆಗಳನ್ನು ಸಿದ್ಧ ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನೂ ಸಹ ಧ್ವನಿ ಮುದ್ರಣ ಮಾಡಲು ನಿರ್ಧರಿಸಿದ್ದಾರೆ.
ಹುಡುಕಿಕೊಂಡು ಬರುವ ಪ್ರಶಸ್ತಿಗಳು: ಕಲಾವಿದ ಸಿದ್ದರಾಜು ಅವರಿಗೆ ಹತ್ತು ಹಲವು ಪ್ರಶಸ್ತಿಗಳು ಲಭಿಸಿವೆ. ಸಂಘ-ಸಂಸ್ಥೆ, ಸರ್ಕಾರದಿಂದಲೂ ಗೌರವ ಸನ್ಮಾನಗಳು ಸಂದಿವೆ. ಕರ್ನಾಟಕದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲೂ ಸಹ ಜಾನದಪ ಕಲಾ ಪ್ರದರ್ಶನ ನೀಡಿದ್ದಾರೆ. ಜಾನಪದ ಕಲೆಯನ್ನು ಉಳಿಸುವ ಸಲುವಾಗಿ ಯುವಪೀಳಿಗೆಗೆ ಜಾನಪದ ಹಾಡುಗಾರಿಕೆಯನ್ನು ಕಲಿಸುವ ಕೆಲಸ ಮಾಡುತ್ತಿದ್ದಾರೆ. ಗುಂಡ್ಲುಪೇಟೆ ಪಟ್ಟಣದಲ್ಲೂ ಸಹ ಉಚಿತವಾಗಿ ಜಾನಪದ ಕಲೆ ಕಲಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಯುವಜನರಿಂದಲೂ ಸಹ ಉತ್ತಮ ಸ್ಪಂದನೆ ದೊರೆಯುತ್ತಿದೆ. ಜಾನಪದ ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕೆಂಬ ನಿಟ್ಟಿನಲ್ಲಿ ಉಚಿತವಾಗಿ ತರಬೇತಿ ನೀಡುವ ಕೆಲಸ ಮಾಡುತ್ತಿದ್ದಾರೆ.
ನನ್ನನ್ನು ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ತುಂಬಾ ಸಂತಸ ತಂದಿದೆ. ತಂಬೂರಿ ಜಾನಪದ ಕಲೆಯನ್ನು ಗುರುತಿಸಿರುವುದು ದೊಡ್ಡ ವಿಚಾರ. ಇದಕ್ಕೆ ಕಾರಣರಾದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಸದಸ್ಯ ಮೈಸೂರು ಉಮೇಶ್ ಮತ್ತು ಗುಂಡ್ಲಪೇಟೆ ಶಾಸಕ ಎಚ.ಎಂ.ಗಣೇಶ್‌ಪ್ರಸಾದ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಸಿದ್ದರಾಜು, ಜಾನಪದ ಕಲಾವಿದ, ಕೆಬ್ಬೇಪುರ, ಗುಂಡ್ಲುಪೇಟೆ