ಕೇಳಿದ್ದು 1373, ಕೊಟ್ಟಿದ್ದು 616!

remdesivir_bottle
Published on

ಧಾರವಾಡ: ಕರೊನಾ ಪೀಡಿತರಲ್ಲಿ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ರೆಮ್ೆಸಿವಿರ್ ಚುಚ್ಚುಮದ್ದು ನೀಡಲಾಗುತ್ತಿದೆ. ಒಂದೆಡೆ ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆಯಿಂದಾಗಿ ಪೀಡಿತರ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತ ಸಾಗುತ್ತಿದೆ. ಮತ್ತೊಂದೆಡೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಬೇಡಿಕೆ ಇಟ್ಟಷ್ಟು ರೆಮ್ೆಸಿವಿರ್ ಚುಚ್ಚುಮದ್ದು ಪೂರೈಕೆಯಾಗುತ್ತಿಲ್ಲ.

ಜಿಲ್ಲೆಯಲ್ಲಿ ರೆಮ್ೆಸಿವಿರ್ ಇಂಜೆಕ್ಷನ್ ಅಭಾವ ಇದೆ ಎನ್ನುವುದಕ್ಕೆ ಜಿಲ್ಲಾಡಳಿತ ನೀಡಿರುವ ಅಧಿಕೃತ ಅಂಕಿ- ಅಂಶಗಳೇ ಸಾಕ್ಷಿ. ಜಿಲ್ಲೆಯ ಬಹುತೇಕ ಖಾಸಗಿ ಆಸ್ಪತ್ರೆಗಳು ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡುತ್ತಿವೆ. ಪ್ರಮುಖ 33 ಆಸ್ಪತ್ರೆಗಳು 1,373 ರೆಮ್ೆಸಿವಿರ್ ವಯಲ್ಸ್ ಪೂರೈಸುವಂತೆ ಆರೋಗ್ಯ ಇಲಾಖೆಗೆ ಬೇಡಿಕೆ (ಇಂಡೆಂಟ್) ಸಲ್ಲಿಸಿದ್ದವು. ಮೇ 15ರ ಅಂಕಿ- ಅಂಶಗಳ ಪ್ರಕಾರ ಸರಬರಾಜು ಆಗಿರುವುದು 616 ವಯಲ್ಸ್ ಮಾತ್ರ.

ಜಿಲ್ಲೆಯ ಪ್ರಮುಖ ಆಸ್ಪತ್ರೆಗಳು ಶೇ. 50ರಷ್ಟು ಹಾಸಿಗೆ ಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡುವಂತೆ ಜಿಲ್ಲಾಡಳಿತದ ನಿರ್ದೇಶನವಿದೆ. ಬಹುತೇಕ ಆಸ್ಪತ್ರೆಗಳು ಜಿಲ್ಲಾಡಳಿತದ ಆದೇಶವನ್ನು ಪಾಲಿಸುತ್ತಿವೆ. ಆದರೆ, ಕೋವಿಡ್​ನಿಂದ ಆರೋಗ್ಯ ತೀವ್ರ ಹದಗೆಟ್ಟ ಪೀಡಿತರಿಗೆ ನೀಡಲಾಗುವ ರೆಮ್ೆಸಿವಿರ್ ಚುಚ್ಚುಮದ್ದಿಗಾಗಿ ಖಾಸಗಿ ಆಸ್ಪತ್ರೆಗಳು ಜಿಲ್ಲಾಡಳಿತದ ಎದುರು ನೋಡುವಂತಾಗಿದೆೆ. ಪ್ರಮುಖ ಆಸ್ಪತ್ರೆಗಳು ಬೇಡಿಕೆ ಇಟ್ಟರೂ ಸರಬರಾಜು ಆಗಿಲ್ಲ. ಮತ್ತೊಂದೆಡೆ ಕೆಲ ಆಸ್ಪತ್ರೆಗಳಿಗೆ ಕಡಿಮೆ ಬೇಡಿಕೆ ಇದ್ದರೂ ದುಪ್ಪಟ್ಟು ರೆಮ್ೆಸಿವಿರ್ ಸರಬರಾಜು ಮಾಡಲಾಗಿದೆ.

ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆ 30, ಶಕುಂತಲಾ ಹಾಸ್ಪಿಟಲ್ 180, ಸೆಕ್ಯುರ್ ಹಾಸ್ಪಿಟಲ್ 36, ಸುಚಿರಾಯು 6, ಶಿವಕೃಪಾ ಆಸ್ಪತ್ರೆ 6 ಹಾಗೂ ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ 9 ರೆಮ್ೆಸಿವಿರ್​ಗೆ ಬೇಡಿಕೆ ಇಟ್ಟಿದ್ದವು. ಆದರೆ, ಮೇ 15ರ ಅಂಕಿ- ಅಂಶದಂತೆ ಈ ಆಸ್ಪತ್ರೆಗಳಿಗೆ ರೆಮ್ೆಸಿವಿರ್ ಪೂರೈಕೆ ಮಾಡಿಲ್ಲ.

ಹುಬ್ಬಳ್ಳಿಯ ವಿವೇಕಾನಂದ ಹಾಸ್ಪಿಟಲ್​ನ ಬೇಡಿಕೆ 114 ಇದ್ದರೂ ಪೂರೈಕೆ ಆಗಿದ್ದು 18 ಮಾತ್ರ. ಅಶೋಕ ಆಸ್ಪತ್ರೆಯಿಂದ ಬೇಡಿಕೆ ಇಲ್ಲದಿದ್ದರೂ 48 ವಯಲ್ಸ್ ಪೂರೈಕೆ ಮಾಡಲಾಗಿದೆ. ಧಾರವಾಡದ ಶ್ರೀಯಾ ಆಸ್ಪತ್ರೆ 240ಕ್ಕೆ ಬೇಡಿಕೆ ಇಟ್ಟರೆ ಪೂರೈಸಿದ್ದು 48. ಹುಬ್ಬಳ್ಳಿಯ ಲೈಫ್​ಲೈನ್ ಹಾಸ್ಪಿಟಲ್​ನಲ್ಲಿ 9ಕ್ಕೆ ಬೇಡಿಕೆ ಇದ್ದರೆ ಪೂರೈಕೆಯಾಗಿರುವುದು 70. ಅದೇ ರೀತಿ ಧಾರವಾಡ ರಾಮನಗೌಡರ ಹಾಸ್ಪಿಟಲ್ 6ಕ್ಕೆ ಬೇಡಿಕೆ ಇಟ್ಟರೆ 12 ಪೂರೈಸಲಾಗಿದೆ. ಹುಬ್ಬಳ್ಳಿಯ ಕ್ಯಾನ್ಸರ್ ಆಸ್ಪತ್ರೆಗೆ 154ರಲ್ಲಿ 48, ಧಾರವಾಡದ ಜರ್ಮನ್ ಆಸ್ಪತ್ರೆಗೆ 60ರಲ್ಲಿ 36, ವಿಠ್ಠಲ್ ನರ್ಸಿಂಗ್ ಹೋಂಗೆ 150ರಲ್ಲಿ 24, ಆರ್ಯಾ ಮಲ್ಟಿ ಸ್ಪೆಷಾಲಿಟಿಗೆ 60ರಲ್ಲಿ 24 ಪೂರೈಕೆಯಾಗಿವೆ. ಹುಬ್ಬಳ್ಳಿಯ ಸಂಜೀವಿನಿ ಹಾಸ್ಪಿಟಲ್​ಗೆ 1 ಡೋಸ್ ಬೇಡಿಕೆ ಇದ್ದರೆ ಪೂರೈಸಲ್ಪಟ್ಟಿದ್ದು 6 ರೆಮ್ೆಸಿವಿರ್.

ಜಿಲ್ಲಾಡಳಿತ ನೀಡಿರುವ ಈ ಅಂಕಿ- ಅಂಶ ಕೆಲವು ಅನುಮಾನಗಳಿಗೆ ಕಾರಣವಾಗಿದೆ. ಬಹುತೇಕ ಆಸ್ಪತ್ರೆಗಳ ಬೇಡಿಕೆಗೆ ಅನುಗುಣವಾಗಿ ಅರ್ಧದಷ್ಟು ಸಹ ಪೂರೈಕೆಯಾಗಿಲ್ಲ. ಕೆಲ ಆಸ್ಪತ್ರೆಗಳಿಗೆ ಒಂದೇ ಒಂದು ಡೋಸ್ ಕೂಡ ನೀಡಿಲ್ಲ. ಕೆಲ ಆಸ್ಪತ್ರೆಗಳಿಗೆ ಬೇಡಿಕೆಯ ದುಪ್ಪಟ್ಟು ಡೋಸ್​ಗಳನ್ನು ನೀಡಲಾಗಿದೆ.

ದರ 3500 ರೂಪಾಯಿ: ಖಾಸಗಿ ಆಸ್ಪತ್ರೆಯವರಿಗೆ ಜಿಲ್ಲಾಡಳಿತವು 100 ಎಂ.ಜಿ.ಯ ಒಂದು ರೆಮ್ೆಸಿವಿರ್ ವಯಲ್ ಅನ್ನು 3500 ರೂ.ಗೆ ಪೂರೈಸುತ್ತಿದೆ. ಈ ಚುಚ್ಚುಮದ್ದನ್ನು ಖಾಸಗಿ ಆಸ್ಪತ್ರೆಯವರು ತಮ್ಮಲ್ಲಿ ದಾಖಲಾಗಿರುವ ರೋಗಿಗಳ ಸಂಖ್ಯೆಯ ಆಧಾರದ ಮೇಲೆ ಜಿಲ್ಲಾಡಳಿತದಿಂದಲೇ ಪಡೆಯಬೇಕಿದೆ. ರೆಮ್ೆಸಿವಿರ್ ಸೇರಿ ಎಲ್ಲ ಔಷಧಗಳನ್ನು ಲಾಜಿಸ್ಟಿಕ್ ಸೊಸೈಟಿ ಎಂಬ ಸಂಸ್ಥೆ ಜಿಲ್ಲಾಡಳಿತಕ್ಕೆ ಪೂರೈಸುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೆಮ್ೆಸಿವಿರ್ ಸೇರಿ ಯಾವುದೇ ಔಷಧ ಕೊರತೆ ಇಲ್ಲ.

ಹಳ್ಳಿಗಳಿಗೆ ಪಸರಿಸಿದ ಮಾರಿ: ಕೋವಿಡ್ 2ನೇ ಅಲೆಯಿಂದಾಗಿ ಲಾಕ್​ಡೌನ್ ಜಾರಿಯಲ್ಲಿದ್ದರೂ ಪೀಡಿತರ ಸಂಖ್ಯೆ ಇಳಿಮುಖವಾಗುತ್ತಿಲ್ಲ. ಪ್ರತಿದಿನ ಸರಾಸರಿ 900 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಜೊತೆಗೆ ರೈತರು ತರಕಾರಿ, ಹೂವು- ಹಣ್ಣು ಮಾರಾಟಕ್ಕೆ ಅನುಕೂಲ ಕಲ್ಪಿಸಲಾಗಿದೆ. ಸಾರಿಗೆ ಬಸ್ ಸಂಚಾರ ಇಲ್ಲದಿರುವುದರಿಂದ ಹಳ್ಳಿಗಳಿಂದ ಜನ ಟಂಟಂಗಳಲ್ಲಿ ಗುಂಪಾಗಿ ಬರುತ್ತಿದ್ದಾರೆ. ಪರಸ್ಪರ ಅಂತರವಿಲ್ಲದೆ ಮಾರುಕಟ್ಟೆಗೆ ಆಗಮಿಸಿ ಗ್ರಾಮಗಳಿಗೆ ಮರಳುತ್ತಿದ್ದಾರೆ. ಇದರಿಂದಾಗಿ ಕರೊನಾ ಸೋಂಕು ಹಳ್ಳಿಗಳಿಗೂ ಪಸರಿಸುತ್ತಿದೆ. ಜಿಲ್ಲೆಗೆ ಹೊಂದಿಕೊಂಡ ಬೇರೆ ಜಿಲ್ಲೆಗಳ ಜನ ಚಿಕಿತ್ಸೆಗಾಗಿ ಧಾರವಾಡ- ಹುಬ್ಬಳ್ಳಿ ನಗರಗಳಿಗೆ ಬರುತ್ತಿದ್ದಾರೆ. ಲಾರಿ ಸೇರಿದಂತೆ ಇತರ ಗೂಡ್ಸ್ ವಾಹನಗಳಲ್ಲಿ ಬಂದು ಹೋಗುತ್ತಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ರೆಮ್ೆಸಿವಿರ್ ಇದ್ದರೂ ಬೇಡಿಕೆ ಬರುತ್ತಿರುತ್ತದೆ. ಹಾಗಾಗಿ ಅಂಥ ಆಸ್ಪತ್ರೆಗಳ ಅಂಕಿ- ಅಂಶವನ್ನು ಪರಿಶೀಲಿಸಿ ಪೂರೈಕೆಯ ಮೇಲುಸ್ತುವಾರಿ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾದ ಪ್ರತಿದಿನದ ವರದಿ ತರಿಸಿಕೊಳ್ಳಲಾಗುತ್ತಿದೆ. ಕರೊನಾ ಪೀಡಿತ ಐಸಿಯು, ವೆಂಟಿಲೇಟರ್, ಎಚ್​ಡಿಯು ಪ್ರಕರಣಗಳಿಗೆ ಪಾರದರ್ಶಕವಾಗಿ ರೆಮ್ೆಸಿವಿರ್ ಚುಚ್ಚುಮದ್ದು ಸಿಗುವಂತೆ ನಿಗಾ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮುಂಚೆ ಇದ್ದ ಅಭಾವ ನಿಯಂತ್ರಣಕ್ಕೆ ಬಂದಿದೆ.| ಅಜಯ ಮುದಗಲ್ಜಿಲ್ಲಾ ಸಹಾಯಕ ಔಷಧ ನಿಯಂತ್ರಕರು, ಧಾರವಾಡ

ಮುಚ್ಚಿದ ಹಳ್ಳಿ ಕ್ಲಿನಿಕ್​ಗಳು

ಗ್ರಾಮೀಣ ಪ್ರದೇಶದಲ್ಲಿ ಊರಿಗೊಂದರಂತೆ ಖಾಸಗಿ ಕ್ಲಿನಿಕ್​ಗಳು ಸಾಮಾನ್ಯ ಕಾಯಿಲೆ ಪೀಡಿತರಿಂದ ತುಂಬಿವೆ. ಸಾಮಾನ್ಯ ಶೀತ, ಕೆಮ್ಮು, ಜ್ವರ, ನೆಗಡಿಯಂಥ ಬಾಧೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. 2ನೇ ಅಲೆಯ ತೀವ್ರತೆಯ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಹಳ್ಳಿ ಕ್ಲಿನಿಕ್​ಗಳ ವೈದ್ಯರು ರೋಗಿಗಳಲ್ಲಿ ಕೋವಿಡ್ ಲಕ್ಷಣ ಕಂಡುಬಂದಾಗ ಪರೀಕ್ಷೆಗೊಳಗಾಗುವಂತೆ ಸಲಹೆ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಕೋವಿಡ್​ನ ಗಂಭೀರತೆ ಅರಿತಿರುವ ಅನೇಕ ಗ್ರಾಮೀಣ ವೈದ್ಯರು ಕ್ಲಿನಿಕ್​ಗಳನ್ನು ಬಂದ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net