ಕೇರಳಕ್ಕೆ ನಾಗರಹೊಳೆ ಮೂಲಕ ರೈಲ್ವೆ ಮಾರ್ಗ : ಅರಣ್ಯದಲ್ಲಿ ಸುರಂಗ ನಿರ್ಮಾಣ..!?

Indian-Railway
Published on

ಮೈಸೂರು: ಕನ್ನಡಿಗರು ಹಾಗೂ ಪರಿಸರ ಪ್ರೇಮಿಗಳ ತೀವ್ರ ವಿರೋಧದ ನಡುವೆಯೂ ಮೈಸೂರು-ಕೇರಳ ನಡುವೆ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕೇರಳ ರಾಜ್ಯ ಸರ್ಕಾರ ಉತ್ಸಾಹ ತೋರುತ್ತಿದೆ. ರೈಲ್ವೆ ಮಾರ್ಗವನ್ನು ನಿರ್ಮಾಣ ಮಾಡಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಕೇರಳ ಇದೀಗ ಹೊಸ ಪ್ರಸ್ತಾಪವೊಂದನ್ನು ಮುಂದಿಟ್ಟಿದೆ.

ತಿರುವನಂತಪುರಂನಲ್ಲಿ ಇತ್ತೀಚೆಗೆ ನಡೆದ ಕೇಂದ್ರ ಗೃ ಸಚಿವಾಲಯದ ಅಂತರ ರಾಜ್ಯ (ದಕ್ಷಿಣ ವಲಯ) ಪರಿಷತ್ತಿನ ಸ್ಥಾಯಿ ಸಮಿತಿ ಸಭೆಯಲ್ಲಿ ‘ಕೇರಳ-ಮೈಸೂರು’ ರೈಲ್ವೆ ಮಾರ್ಗ ಮತ್ತೊಮ್ಮೆ ಪ್ರಸ್ತಾಪಗೊಂಡಿದೆ. ನಿಲಂಬೂರು-ನಂಜನಗೂಡು ರೈಲು ಯೋಜನೆಯನ್ನು 2016-17ನೇ ಸಾಲಿನ ರೈಲ್ವೆ ಪಿಂಕ್ ಪುಸ್ತಕದಲ್ಲಿ ಸೇರ್ಪಡೆ ಮಾಡಲಾಗಿದೆ. ಆದರೆ, ಪರಿಸರ ನಾಶವಾಗುವ ಆತಂಕದಿಂದ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿರಲಿಲ್ಲ. ಇದೀಗ ಕೇರಳ ಸರ್ಕಾರ ಪರ್ಯಾಯ ಮಾರ್ಗದಲ್ಲಿ ರೈಲ್ವೆ ಮಾರ್ಗ ನಿರ್ಮಾಣದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಮುಂದಿಟ್ಟಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ನಂತರ ಪ್ರತಿಕ್ರಿಯೆ ನೀಡುತ್ತೇವೆ ಎಂದು ರಾಜ್ಯದ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಕೇರಳ ಸೂಚಿಸಿರುವ ಪರ್ಯಾಯ ಮಾರ್ಗವು ನಾಗರಹೊಳೆ ಅರಣ್ಯದ ಬಫರ್ ರೆನ್ ಮೂಲಕ ಹಾದು ಹೋಗಲಿದ್ದು, ಅರಣ್ಯ ಪ್ರದೇಶದಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಈ ಮಾರ್ಗವು ಕೇರಳದ ತಲಶ್ಯೇರಿಯಿಂದ ಪ್ರಾರಂಭಗೊಂಡು ಅಂತರಸಂತೆ, ಎಚ್.ಡಿ. ಕೋಟೆ ಮೂಲಕ ಹಾದು ಕಡಕೊಳದಲ್ಲಿ ಅಂತ್ಯಗೊಳ್ಳಲಿದೆ. ಒಟ್ಟು 22 ಕಿ.ಮೀ. ಅರಣ್ಯ ಪ್ರದೇಶದಲ್ಲಿ ರೈಲ್ವೆ ಮಾರ್ಗ ಹಾದು ಹೋಗಲಿದ್ದು, ಅಲ್ಲಿ ಸುರಂಗ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net