

ಮೈಸೂರು:
ಕಳೆದ 25 ದಿನಗಳಿಂದ ಕೇರಳ ಆಶಾ ಕಾರ್ಯಕರ್ತೆಯರು ತಿರುವನಂತಪುರಂನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟವನ್ನು ಬೆಂಬಲಿಸಿ ಎಐಯುಟಿಯುಸಿ ಜಿಲ್ಲಾ ಸಮಿತಿಯ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಮೇಟಿ ಮಾತನಾಡಿ, ಕೇರಳದಲ್ಲಿ ಆಡಳಿತ ನಡೆಸುತ್ತಿರುವ ಸಿಪಿಐ(ಎಂ) ನೇತೃತ್ವದ ಎಡರಂಗದ ಸರ್ಕಾರ ಇತರ ಬಂಡವಾಳಶಾಹಿ ಪರ ಪಕ್ಷಗಳಿಗಿಂತ ಭಿನ್ನವಿಲ್ಲ. ಬಿಜೆಪಿ, ಕಾಂಗ್ರೆಸ್ ಬಹಿರಂಗವಾಗಿ ಬಂಡವಾಳಶಾಹಿಗಳ ಪರ ಹೇಳಿಕೊಂಡರೆ, ಇವರು ಅದನ್ನು ಕೃತಿಯಲ್ಲಿ ಮಾಡಿ ತೋರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದೇಶಾದ್ಯಂತ ನೂತನ ಕಾರ್ಮಿಕ ಸಂಹಿತೆ, ಗುತ್ತಿಗೆ ಪದ್ಧತಿ ವಿರೋಧಿಸಿ ಇತರ ಕಾರ್ಮಿಕ ಸಂಘಟನೆಗಳೊಂದಿಗೆ ಹೋರಾಟವನ್ನು ಕಟ್ಟುವ ಇವರು ಕೇರಳದ ಸಾರಿಗೆ ಸಂಸ್ಥೆಯಲ್ಲಿ ಏಳೆಂಟು ವರ್ಷಗಳಿಂದ ಹಿಂದೆಯೇ ಹೊರಗುತ್ತಿಗೆ ಅಡಿಯಲ್ಲಿ ನೌಕರರನ್ನು ನೇಮಿಸಿಕೊಂಡಿದ್ದಾರೆ. ಅಲ್ಲದೇ ಕಾರ್ಮಿಕ ಸಂಹಿತೆಯನ್ನು ಜಾರಿ ಮಾಡಲು ಅವಶ್ಯಕ ತಯಾರಿ ಮಾಡಿಕೊಂಡಿದ್ದಾರೆ ಎಂದು ದೂರಿದರು
ಭೌಗೋಳಿಕವಾಗಿ ವಿಭಿನ್ನವಾಗಿರುವ ಕೇರಳ ಒಬ್ಬ ಆಶಾ ಕಾರ್ಯಕರ್ತೆ ಸುಮಾರು 10 ಕಿ.ಮೀ. ಪ್ರದೇಶದಲ್ಲಿ ಕೆಲಸ ಮಾಡಬೇಕಿದೆ. ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗುವುದರಿಂದ ಇವರು ಸಾಮಾನ್ಯವಾಗಿ ನಮ್ಮ ರಾಜ್ಯದ ಆಶಾ ಕಾರ್ಯಕರ್ತೆಯರು ಮಾಡುವ ಎರಡರಷ್ಟು ಹೆಚ್ಚುವರಿ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಇವರಿಗೆ ನೀಡುವ 7000 ರೂ. ಸಾಲುವುದಿಲ್ಲ. ಈ ಗೌರವಧನ ಏರಿಕೆಗೆ ಆಗ್ರಹಿಸಿ ಕಳೆದ 25 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ದೇಶದ ಇತರೆಡೆ ಸ್ಕೀಮ್ ನೌಕರರಿಗೆ ಕನಿಷ್ಠ 24000 ರೂ. ನಿಗದಿ ಮಾಡಬೇಕೆಂಬುದು ಇವರ ಬೇಡಿಕೆಯಾಗಿದೆ ಎಂದು ತಿಳಿಸಿದರು.
ಎಐಎಂಎಸ್‌ಎಸ್ ಜಿಲ್ಲಾ ಉಪಾಧ್ಯಕ್ಷೆ ಶೀಬಾ ಮಾತನಾಡಿ, ಬೆಲೆ ಏರಿಕೆಯ ದಿನಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ನೀಡುವ 7000 ರೂ. ಗೌರವ ಧನದಲ್ಲಿ ಜೀವನವನ್ನು ನಡೆಸುವುದು ಕಷ್ಟಕರ. ಹೀಗಾಗಿ ಕೇರಳದ ಆಶಾ ಕಾರ್ಯಕರ್ತೆಯರ ಹೋರಾಟ ನ್ಯಾಯಯುತವಾಗಿದೆ. ಈ ಕೂಡಲೇ ಕೇರಳ ಸರ್ಕಾರ ಸ್ಪಂದಿಸಬೇಕೆಂದು ಆಗ್ರಹಿಸಿದರು.
ಪಿ.ಎಸ್.ಸಂಧ್ಯಾ ಮಾತನಾಡಿ, ಕೇರಳ ಆಶಾ ಕಾರ್ಯಕರ್ತೆಯರ ನ್ಯಾಯೋಚಿತ ಬೇಡಿಕೆ ಈಡೇರಿಸುವ ಬದಲಿಗೆ ಹೋರಾಟವನ್ನು ದಮನ ಮಾಡುವ ಪ್ರಯತ್ನವನ್ನು ಅಲ್ಲಿಯ ಸರ್ಕಾರ ಮಾಡುತ್ತಿದೆ. ಹೋರಾಟದ ಮುಂಚೂಣಿ ನಾಯಕರು ಮತ್ತು ಹೋರಾಟಕ್ಕೆ ಬೆಂಬಲಿಸಿದ ಬುದ್ಧಿಜೀವಿಗಳ ವಿರುದ್ಧ ಪ್ರಕರಣ ದಾಖಲಿಸಿದೆ. ಹೋರಾಟದಲ್ಲಿ ತೊಡಗಿಕೊಂಡಿರುವ ನಾಯಕರ ತೇಜೋವಧೆ ಮಾಡುತ್ತಿದೆ ಎಂದು ಕಿಡಿಕಾರಿದರು.
ಎಐಯುಟಿಯುಸಿ ಜಿಲ್ಲಾಧ್ಯಕ್ಷೆ ಯಶೋದರ್, ಮುಖಂಡರಾದ ಮುದ್ದುಕೃಷ್ಣ, ಹರೀಶ್, ಎಐಎಂಎಸ್‌ಎಸ್ ಜಿಲ್ಲಾ ಉಪಾಧ್ಯಕ್ಷೆ ಸೀಮಾ, ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಪದಾಧಿಕಾರಿಗಳಾದ ಮಣಿಲಾ, ರೂಪಾ, ನಿರ್ಮಲಾ, ಎಐಯುಟಿಯುಸಿಯ ಕಾರ್ಯಕರ್ತರಾದ ಕುಮಾರಸ್ವಾಮಿ, ಶಂಕರೇಗೌಡ ಇನ್ನಿತರರಿದ್ದರು.