ಕೇಂದ್ರದೊಂದಿಗೆ ಕರ್ನಾಟಕ ಸರ್ಕಾರವಿದೆ

D.sudhakar dist minister--0002
Published on

ಚಿತ್ರದುರ್ಗ: ಪಹಲ್ಗಾಮ್‌ನಲ್ಲಿ ಹಿಂದುಗಳ ಮೇಲೆ ನಡೆದ ಉಗ್ರರ ಅಟ್ಟಹಾಸವನ್ನು ಖಂಡಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಘಟನೆ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ದೇಶಾದ್ಯಂತ ಸರ್ವಪಕ್ಷಗಳು ಬೆಂಬಲ ನೀಡಿವೆ. ಈ ಕೃತ್ಯ ಎಸಗಿದವರನ್ನು ಸದೆ ಬಡಿಯುವ ಕೆಲಸ ಕೇಂದ್ರ ಮಾಡಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಕರ್ನಾಟಕ ಸರ್ಕಾರವು ಜತೆಗಿರಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಈಗಾಗಲೇ ಈ ಮಾತನ್ನು ಹೇಳಿದ್ದಾರೆ. ಈ ರೀತಿಯ ಕೋಮುವಾದ ಬಿತ್ತುವಂತಹ ಘಟನೆಗಳಾಗಬಾರದು. ಇದರಲ್ಲಿ ರಾಜಕಾರಣ ಬೆರೆಸುವ ಪ್ರಶ್ನೆ ಬರುವುದಿಲ್ಲ. ದೇಶದ ಏಕತೆ, ಸಮಗ್ರತೆಗೆ ಎಲ್ಲರೂ ಬದ್ಧರಾಗಿರಬೇಕಿದೆ ಎಂದು ತಿಳಿಸಿದರು.

ರಾಬರ್ಟ್ ವಾದ್ರಾ ಹೇಳಿಕೆ ವಿಚಾರಕ್ಕೆ ನಾನು ರಿಯಾಕ್ಟ್ ಮಾಡಲ್ಲ ಎಂದ ಸಚಿವರು, ದೇಶ ಶಾಂತಿಯಿಂದ ಅಹಿಂಸಾ ಮಾರ್ಗದಲ್ಲಿ ಹೋಗಬೇಕು. ಯಾವುದೇ ಕಾರಣಕ್ಕೂ ಉಗ್ರವಾದವನ್ನು ಸಹಿಸುವುದಿಲ್ಲ ಎಂದು ಭಾರತ ಸಂದೇಶ ರವಾನಿಸಿದೆ. ಇದಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net