

ಆಲೂರು: ದೇಶದ ಪ್ರತಿಯೊಂದು ಮನೆಗೂ ನಲ್ಲಿ ಮೂಲಕ ನೀರು ಕೊಡುವಂತಹ ಮಹಾದಾಸೆಯನ್ನು ಹೊಂದಿರುವಂತಹ ಪ್ರಧಾನಿ ನರೇಂದ್ರ ಮೋದೀಜಿ ನೇತೃತ್ವದ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡುತ್ತಿದೆ ಎಂದು ಆಲೂರು ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ತಾಲೂಕಿನ ಕಾರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರಬೈರವನಹಳ್ಳಿ ಗ್ರಾಮದಲ್ಲಿ 60 ಲಕ್ಷ ರೂ. ವೆಚ್ಚದ ಜೆಜೆಎಂ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಚುನಾವಣೆಗೂ ಮುನ್ನಾ ಪ್ರತಿ ಮನೆಗೂ ಕುಡಿಯುವ ನೀರು ಒದಗಿಸುವುದಾಗಿ ಹೇಳಿದ್ದೆ. ಅದರಂತೆ ಜಲಜೀವನ ಮಿಷನ್ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಪ್ರತಿ ಮನೆ ಮನೆಗೂ ನಲ್ಲಿ ಮೂಲಕ ನೀರು ಕೊಡುವಂತಹ ಕೆಲಸ ಬಹುತೇಕ ಪೂರ್ಣಗೊಳ್ಳುತ್ತಿದೆ. ಕಾರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಹೊಸೂರು, ಮಣಿಪುರ ಹಾಗೂ ಪುರಬೈರವನಹಳ್ಳಿ ಸೇರಿ ಮೂರು ಗ್ರಾಮಗಳಿಂದ ಸುಮಾರು 113 ಮನೆಗಳಿಗೆ ಜೆಜೆಎಂ ಯೋಜನೆಯಡಿಯಲ್ಲಿ ಕುಡಿಯುವ ನೀರು ಒದಗಿಸುವ ಸಲುವಾಗಿ ಕಾಮಗಾರಿಗೆ ಭೂಮಿಪೂಜೆ ಮಾಡಲಾಗಿದೆ. ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅದೇ ರೀತಿ ಗುತ್ತಿಗೆದಾರರು ಆದಷ್ಟು ಬೇಗ ಉತ್ತಮ ರೀತಿಯಲ್ಲಿ ಕಾಮಗಾರಿ ಮುಗಿಸಿಕೊಡಬೇಕು ಎಂದು ತಾಕೀತು ಮಾಡಿದರು.
ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡದೇ ಗ್ಯಾರಂಟಿ ಹೆಸರಿನಲ್ಲಿ ಕಾಲ ಕಳೆಯುತ್ತಿದೆ. ಈ ಭಾಗದಲ್ಲಿ ಹಲವಾರು ಕೆಲಸಗಳು ಬಾಕಿ ಉಳಿದಿವೆ. ಬರುವ ಅನುದಾನದಲ್ಲಿ ಆಗಬೇಕಾಗಿರುವ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು. ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಉಪಾಧ್ಯಕ್ಷ ಪೂವಯ್ಯ, ಶಶಿಧರ್, ರವಿ ಹಂಜಳಿಗೆ, ದಿನೇಶ್ ಅದಿಬೈಲ್, ಗ್ರಾಮ ಪಂಚಾಯಿತಿ ಸದಸ್ಯರಾದ ಅನುಸೂಯ ಸತೀಶ್ ಪುರಬೈರವನಹಳ್ಳಿ, ಧರಣೇಶ್ ಹಂಜಳಿಗೆ, ವಾಸು ವೈ.ಎನ್.ಪುರ, ಪುರಬೈರವನಹಳ್ಳಿ ರಂಗಸ್ವಾಮಿ, ಸಂದೀಪ್, ರಕ್ಷಿತ್, ಚೇತನ್ ಮಗ್ಗೆ ಇತರರಿದ್ದರು.