ಕೇಂದ್ರದಿಂದ ಮೂಗಿಗೆ ತುಪ್ಪ ಸವರುವ ಕೆಲಸ

IMG_0304
Published on

ಶಿವಮೊಗ್ಗ: ಕರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಘೊಷಿಸಿರುವ ಪ್ಯಾಕೇಜ್ ಈ ಕ್ಷಣದಲ್ಲಿ ಕಾರ್ಯರೂಪಕ್ಕೆ ಬರುವುದಿಲ್ಲ. ಇದು ದೀರ್ಘ ಕಾಲದಲ್ಲಿ ಅನುಷ್ಠಾನ ಆಗುವಂಥದ್ದು. ಈ ಸಂದರ್ಭದಲ್ಲಿ ಸಮಸ್ಯೆಗೆ ಸಿಲುಕಿರುವವರಿಗೆ ಇದು ಪ್ರಯೋಜನವಾಗುವುದಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.

ಲಾಕ್​ಡೌನ್​ಗೆ ಮುನ್ನವೇ ಜಿಡಿಪಿ ಪಾತಾಳಕ್ಕೆ ಕುಸಿದಿತ್ತು. ಈಗ ಆರ್ಥಿಕ ಪ್ಯಾಕೇಜ್ ಘೊಷಣೆಯಿಂದ ಜಿಡಿಪಿ ಸೂಚ್ಯಂಕ ಏರಿಕೆಯಾಗುವುದಿಲ್ಲ. ಬಂಡವಾಳಶಾಹಿಗಳಿಗೆ ಇದರಿಂದ ಅನುಕೂಲವಾಗಬಹುದು. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಇದರಿಂದ ಪ್ರಯೋಜನವಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

ಪ್ರತಿ ಬಜೆಟ್​ನಲ್ಲೂ ಕೇಂದ್ರ ಸರ್ಕಾರ ಹೊಸ ಘೊಷಣೆಗಳನ್ನು ಮಾಡಿದೆ. ಆರ್ಥಿಕ ಪ್ಯಾಕೇಜ್ ಘೊಷಣೆ ಅದರ ಮುಂದುವರಿದ ಭಾಗವಷ್ಟೇ. ಇದುವರೆಗೆ ಕೇಂದ್ರ ಸರ್ಕಾರದ ಯಾವ ಘೊಷಣೆಗಳೂ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಇದು ಜನರ ಮೂಗಿಗೆ ತುಪ್ಪ ಸವರುವ ಕೆಲಸ ಎಂದು ಟೀಕಿಸಿದರು.

ಲಾಕ್​ಡೌನ್ ಘೊಷಣೆಗೂ ಮುನ್ನ ಕೇಂದ್ರ ಸರ್ಕಾರ ಪೂರ್ವ ತಯಾರಿ ಮಾಡಿಕೊಳ್ಳಲಿಲ್ಲ. ವಲಸೆ ಕಾರ್ವಿುಕರನ್ನು ಅವರ ಊರುಗಳಿಗೆ ತೆರಳಲು ಅವಕಾಶ ನೀಡಬೇಕಿತ್ತು. ಲಾಕ್​ಡೌನ್ ನಂತರವೂ ಕರೊನಾ ನಿಯಂತ್ರಣಕ್ಕೆ ಬಂದಿಲ್ಲ. ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಇದು ನಿದರ್ಶನ ಎಂದರು.

ಹಲವು ಸಾಂಕ್ರಾಮಿಕ ರೋಗಗಳ ನಡುವೆಯೂ ಕಾಂಗ್ರೆಸ್ ದೇಶವನ್ನು ಸದೃಢವಾಗಿ ಮುನ್ನಡೆಸಿತ್ತು. ಬಿಜೆಪಿ ದೇಶವನ್ನು ಅಧೋಗತಿಗೆ ಕೊಂಡೊಯ್ದಿದೆ. ವಿದೇಶಗಳನ್ನು ಸುತ್ತಿದ್ದ ಪ್ರಧಾನಿ, ದೇಶಕ್ಕೆ ಬಂಡವಾಳ ಹರಿದು ಬರಲಿದೆ ಎಂದು ಹೇಳುತ್ತಿದ್ದರು. ಈಗ ಗುಡಿ ಕೈಗಾರಿಕೆ ಬಗ್ಗೆ ಪ್ರಸ್ತಾಪಿಸುತ್ತಿರುವುದು ವಿಪರ್ಯಾಸ ಎಂದು ಹೇಳಿದರು.

ರೈತರ ಸಾಲ ಮನ್ನಾ ಮಾಡಬೇಕು. ಹೊಸದಾಗಿ 50 ಸಾವಿರ ರೂ. ಸಾಲ ನೀಡಬೇಕು. ಪ್ರತಿ ರಾಜ್ಯಕ್ಕೂ 1 ಲಕ್ಷ ಕೋಟಿ ರೂ. ಅನುದಾನ ನೀಡಬೇಕು. ಇದುವರೆಗೆ ಪಿಎಂ ಕೇರ್ಸ್​ಗೆ ಕೋಟ್ಯಂತರ ರೂ. ದೇಣಿಗೆ ಬಂದಿದೆ. ಅದರ ಬಳಕೆ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ಜಿಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿಲುವಳಿ ಇಲ್ಲ: ಜಿಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸುವ ಬಗ್ಗೆ ಪಕ್ಷದಲ್ಲಿ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ನಾವೇ ಅಧ್ಯಕ್ಷರು, ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದು. ಅವರ ವಿರುದ್ಧವೇ ಅವಿಶ್ವಾಸ ನಿಲುವಳಿ ಮಂಡಿಸುವ ಯೋಚನೆಯಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು. ಅಧಿಕಾರ ಹಂಚಿಕೆ ಸಂದರ್ಭದಲ್ಲಿ ಏನು ಮಾತುಕತೆ ನಡೆದಿದೆ. ಈಗೇನು ಮಾಡಬೇಕೆಂಬ ಬಗ್ಗೆ ಪಕ್ಷದ ಮುಖಂಡರು ಕುಳಿತು ರ್ಚಚಿಸುತ್ತೇವೆ. ನಮ್ಮ ಪಕ್ಷದ ಜಿಪಂ ಸದಸ್ಯರು ಏನು ತೀರ್ಮಾನ ಮಾಡುತ್ತಾರೆ ಎಂಬುದನ್ನು ಪರಿಶೀಲಿಸುತ್ತೇವೆ. ಕರೊನಾ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಮಾತನಾಡಿ, ಗ್ರಾಪಂ ಕಾಯ್ದೆಗೆ ಸುಗ್ರೀವಾಜ್ಞೆ ತರುವ ಮೂಲಕ ಕಾನೂನು ಬದಲಾವಣೆಗೆ ರಾಜ್ಯ ಸರ್ಕಾರ ಮುಂದಾಗಿರುವುದು ಸರಿಯಲ್ಲ. ಗ್ರಾಪಂ ಸದಸ್ಯರ ಅಧಿಕಾರ ಅವಧಿ ಮುಗಿದ ಬಳಿಕ ಆಡಳಿತಾಧಿಕಾರಿ ನೇಮಿಸುವ ಬದಲು ಚುನಾವಣೆವರೆಗೂ ಸದಸ್ಯರ ಅಧಿಕಾರ ಮುಂದುವರಿಯುವಂತೆ ನೋಡಿಕೊಳ್ಳಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪ್ರಮುಖರಾದ ವಿಶ್ವನಾಥ ಕಾಶಿ, ಚಂದ್ರಭೂಪಾಲ, ನಾಗರಾಜ್, ದೀಪಕ್ ಸಿಂಗ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net