ಕೇಂದ್ರದಿಂದ ಒಕ್ಕೂಟ ವ್ಯವಸ್ಥೆ ದುರ್ಬಲಗೊಳಿಸುವ ಹುನ್ನಾರ

5
Published on

ಮೈಸೂರು: ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಿ ರಾಜ್ಯ ಸರ್ಕಾರಗಳ ಮೇಲೆ ಹಿಡಿತ ಸಾಧಿಸುತ್ತಿದ್ದು, ಇದು ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ವಿಶ್ರಾಂತ ಕುಲಪತಿ, ಕಾನೂನು ವಿದ್ವಾಂಸ ಡಾ.ಜಿ.ಮೋಹನ್‌ಗೋಪಾಲ್ ಕಳವಳ ವ್ಯಕ್ತಪಡಿಸಿದರು.


ಮೈಸೂರು ವಿ.ವಿ. ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣ ಕೇಂದ್ರ ಹಾಗೂ ಇಂಡಿಯನ್ ಪಾಲಿಟಿಫೋರಂ ಸಹಯೋಗದಲ್ಲಿ ಮಾನಸಗಂಗೋತ್ರಿಯ ವಿಶ್ವಜ್ಞಾನಿ ಸಭಾಂಗಣದಲ್ಲಿ ಶುಕ್ರವಾರ ‘ಕ್ಷೇತ್ರ ಪುನರ್ವಿಂಗಡಣೆ; ಅಂತಾರಾಜ್ಯ ಅಸಮಾನತೆ ಮತ್ತು ಅದರ ಪರಿಣಾಮಗಳು’ ಕುರಿತ 2 ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.


ಕೇಂದ್ರ ಸರ್ಕಾರ ಸಂವಿಧಾನದ ಮೂಲಭೂತ ಆಶಯಗಳಿಗೆ ವಿರುದ್ಧ ನಡೆ ಅನುಸರಿಸುತ್ತಿದೆ. ಇದರ ಭಾಗವಾಗಿ ರಾಜ್ಯ ಸರ್ಕಾರಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಇದರಲ್ಲಿ ಆರ್ಥಿಕ ಉದ್ದೇಶಕ್ಕಿಂತ ರಾಜಕೀಯ ಉದ್ದೇಶವೇ ಹೆಚ್ಚು ಕೆಲಸ ಮಾಡುತ್ತಿದೆ ಎಂದರು.


ಡಬಲ್ ಇಂಜಿನ್ ಸರ್ಕಾರ ಪರಿಕಲ್ಪನೆಗಳನ್ನು ಹೊಸದಾಗಿ ಬಿತ್ತಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷ ಅಧಿಕಾರ ಹಿಡಿಯಬೇಕೆಂಬ ಹುನ್ನಾರ ಇದರಲ್ಲಿ ಅಡಗಿದೆ. ಒಂದೇ ಶಕ್ತಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ನಿಯಂತ್ರಣ ಸಾಧಿಸುವ ಯತ್ನವಾಗಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಉತ್ತಮ ಆರ್ಥಿಕ, ಯೋಜನೆಗಳ ಪ್ಯಾಕೇಜಿಂಗ್ ದೊರೆಯಲಿದೆ ಎಂಬ ಆಸೆ ಹುಟ್ಟಿಸಲಾಗುತ್ತಿದೆ. ಇದು ಕೆಟ್ಟ ಬೆಳವಣಿಗೆ. ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಡೆ ಎಂದು ಟೀಕಿಸಿದರು.


ರಾಜಕೀಯ, ಸರ್ಕಾರಿ ಉನ್ನತ ಸ್ಥಾನ, ಮಾಧ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮೇಲ್ವರ್ಗದ ಒಂದು ಜಾತಿಯೇ ಏಕಸ್ವಾಮ್ಯ ಸಾಧಿಸಿದೆ. ಸ್ವಾತಂತ್ರೃ ಬಂದು ಇಷ್ಟು ವರ್ಷವಾದರೂ ಇದು ನಿವಾರಣೆಯಾಗಿಲ್ಲ. ಸಮಾಜದ ತಳಸಮುದಾಯದವರು ಮುಖ್ಯವಾಹಿನಿಗೆ ಬರಲು ಈಗಲೂ ಕಷ್ಟಪಡುವಂತಾಗಿದೆ ಎಂದರು.


ಜಾತ್ಯತೀತ ದೇಶದಲ್ಲಿ ಹಿಂದು ಪ್ರಾಬಲ್ಯ ಹೆಚ್ಚಾಗುತ್ತಿದ್ದು, ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರೈಸ್ತರಿಗೆ ಅವಕಾಶಗಳು ಕಡಿಮೆಯಾಗಿವೆ. ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಏರಲು ಈಗಲೂ ಮುಸ್ಲಿಮರಿಗೆ ಸಾಧ್ಯವಾಗಿಲ್ಲ. ದಲಿತರು ಈ ಹುದ್ದೆಗೆ ತಲುಪುವುದು ಹೇಗೆ ಎಂದು ಪ್ರಶ್ನಿಸಿದರು.


ಹಿಂದಿಯೇತರ ದಕ್ಷಿಣ ಭಾರತದ ರಾಜ್ಯಗಳಾದ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿವೆ. ಅಂತೆಯೆ, ಉತ್ತರ ಭಾರತದ ಹಿಂದಿಯೇತರ ರಾಜ್ಯಗಳಾದ ಪಂಜಾಬ್, ಜಮ್ಮು-ಕಾಶ್ಮೀರ ಜನಸಂಖ್ಯೆಯಲ್ಲಿ ಹಿಂದಿವೆ. ಆದರೆ, ಅದೇ ಹಿಂದಿ ಭಾಷಿಕ ರಾಜ್ಯಗಳು ಅಭಿವೃದ್ಧಿಯಲ್ಲಿ ಹಿಂದಿದ್ದು, ಜನಸಂಖ್ಯೆಯಲ್ಲಿ ಮುಂದಿವೆ. ಇದು ರಾಜ್ಯಗಳ ನಡುವೆ ಅಸಮಾನತೆಗೆ ನಾಂದಿ ಹಾಡಿದೆ ಎಂದರು.


ಹೆಚ್ಚು ಜನಸಂಖ್ಯೆ ಹೊಂದಿರುವ, ಆದರೆ ಕಡಿಮೆ ಅಭಿವೃದ್ಧಿ ರಾಜ್ಯಗಳು ಸಂಸತ್‌ನಲ್ಲಿ ಹೆಚ್ಚು ಪ್ರಾತಿನಿಧ್ಯ ಮತ್ತು ಪ್ರಾಬಲ್ಯ ಪಡೆದುಕೊಂಡಿವೆ. ಕಡಿಮೆ ಪ್ರಾತಿನಿಧ್ಯ ಪಡೆದಿರುವ, ಆದರೆ ಹೆಚ್ಚು ಅಭಿವೃದ್ಧಿ ಹೊಂದಿದ ರಾಜ್ಯಗಳು ಒಕ್ಕೂಟ ವ್ಯವಸ್ಥೆಯಲ್ಲಿ ಕಡಿಮೆ ಪ್ರಭಾವ ಹೊಂದಿವೆ. ಹೆಚ್ಚು ಅಭಿವೃದ್ಧಿ ಪಡೆದ ಕಾರಣಕ್ಕಾಗಿ ಈ ರಾಜ್ಯಗಳು ಅಸಮಾನತೆ ಪರಿಣಾಮಕ್ಕೆ ಒಳಗಾಗಿವೆ ಎಂದು ವಿಶ್ಲೇಷಿಸಿದರು.


ಅಸಮಾನತೆಯನ್ನು ಹೋಗಲಾಡಿಸಲು ಜನಸಂಖ್ಯಾ ಆಧಾರದ ಮೇಲೆ ಸಂಸತ್‌ನಲ್ಲಿ ಪ್ರಾತಿನಿಧ್ಯ ನಿಗದಿಯಾಗಬೇಕು. ಆ ನಿಟ್ಟಿನಲ್ಲಿ ಕ್ಷೇತ್ರ ಪುನರ್ವಿಂಗಡಣೆ ಆಗಬೇಕು. ಇದುವೇ ಡಾ.ಬಿ.ಆರ್.ಅಂಬೇಡ್ಕರ್ ಆಶಯ ಆಗಿತ್ತು. ಇದರಿಂದ ಕೆಳಹಂತದ ಸಮುದಾಯಗಳು ಉನ್ನತ ಹುದ್ದೆಗಳಿಗೆ ಏರಲು ಸಾಧ್ಯವಾಗಲಿದೆ ಎಂದರು.


ನಿವೃತ್ತ ಮೇಜರ್ ಜನರಲ್ ಡಾ.ಎಸ್.ಜಿ.ಒಂಬತ್ಕೆರೆ ಮಾತನಾಡಿ, ಭಾರತ ದೇಶವನ್ನು ಉತ್ತಮ ಮತ್ತು ದಕ್ಷಿಣ ಭಾಗವಾಗಿ ವಿಭಜನೆ ಮಾಡುವ ಷಡ್ಯಂತ್ರ ನಡೆದಿದೆ. ಹೊಸ ಸಂಸತ್ ಉದ್ಘಾಟನೆಯೊಂದಿಗೆ ಇಂತಹ ಮುನ್ಸೂಚನೆ ಹೊರಬಿದ್ದಿದೆ ಎಂದರು.


ಎಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿಯ ನಿವೃತ್ತ ಸಂಪಾದಕ ಪ್ರೊ.ಗೋಪಾಲ್ ಗುರು, ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್.ಸೋಮಶೇಖರ್, ಮೈವಿವಿ ಡಾ.ಬಿ.ಆರ್.ಅಂಬೇಡ್ಕರ್ ಪೀಠದ ಸಂದರ್ಶಕ ಪ್ರಾಧ್ಯಾಪಕಿ ಪ್ರೊ.ಆರ್.ಇಂದಿರಾ, ಅಂಬೇಡ್ಕರ್ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರಕುಮಾರ್, ಪ್ರಾಧ್ಯಾಪಕ ಪ್ರೊ.ಜೆ.ಸೋಮಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net