ಕೇಂದ್ರದಿಂದ 3.20 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬಾಕಿ

09 NMG 02
Published on

ನಾಗಮಂಗಲ: ಕೇಂದ್ರ ಸರ್ಕಾರ 3.20 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ರಾಜ್ಯಕ್ಕೆ ನೀಡಬೇಕಿರುವುದನ್ನು ಬಾಕಿ ಉಳಿಸಿಕೊಂಡಿದೆ. ಆದರೂ ಯಾವುದೇ ತೊಂದರೆಯಾಗದಂತೆ ರೈತರಿಗೆ ರಸಗೊಬ್ಬರ ಪೂರೈಕೆ ಮಾಡಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಬಿಎಸ್‌ಎಫ್ ಫೌಂಡೇಷನ್ ಹಾಗೂ ಭೂಸಿರಿ ರೈತ ಉತ್ಪಾದಕರ ಕಂಪನಿ ವತಿಯಿಂದ ಶನಿವಾರ ಆಯೋಜಿಸಿದ್ದ ರೈತರಿಗೆ ಬಿತ್ತನೆ ರಾಗಿ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರ ರಸಗೊಬ್ಬರವನ್ನು ಸರಿಯಾಗಿ ಪೂರೈಕೆ ಮಾಡುತ್ತಿಲ್ಲ ಎನ್ನುತ್ತಿರುವ ವಿರೋಧ ಪಕ್ಷ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿಯವರು 2 ವರ್ಷಗಳಿಂದಲೂ ನಾನು ಕೃಷಿ ಸಚಿವನಾಗಿ ಉಳಿದು ರೈತಪರವಾದ, ಜನಪರವಾದ ಕೆಲಸ ಮಾಡುತ್ತಿರುವುದನ್ನು ಸಹಿಸಲಾಗದೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ರಸಗೊಬ್ಬರಕ್ಕೆ ಅಭಾವ ಉಂಟಾಗಿಲ್ಲ. ಕೇಂದ್ರದಿಂದ ಬಾಕಿಯಿರುವ 3.20 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಬಿಜೆಪಿಯವರು ರಾಜ್ಯಕ್ಕೆ ಮೊದಲು ಕೊಡಿಸಲಿ. ರಸಗೊಬ್ಬರ ಸರಬರಾಜು ಮಾಡಬೇಕಿರುವುದು ಕೇಂದ್ರ ಸರ್ಕಾರದ ಕೆಲಸ. ಅದನ್ನು ಕೇಂದ್ರ ಸರ್ಕಾರ ನಿಭಾಯಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಗಿ ಹಾಗೂ ಭತ್ತದ ಬಿತ್ತನೆ ಬೀಜಗಳನ್ನು ಸರ್ಕಾರದಿಂದ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ಈ ಬಿತ್ತನೆ ಬೀಜಗಳನ್ನು ಸಂಸ್ಕರಿಸಿ, ಪ್ರಮಾಣೀಕರಿಸಲಾಗಿರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಕಳೆದ ವರ್ಷ ಬೆಳೆದ ಬೆಳೆಯನ್ನೆ ಬಿತ್ತನೆಗೆಂದು ಶೇಖರಿಸಿಟ್ಟುಕೊಳ್ಳುವುದು ವಾಡಿಕೆ. ಆದರೆ ಇಳುವರಿ ಹೆಚ್ಚು ಪಡೆಯಬೇಕೆಂದರೆ ಸಂಸ್ಕರಿಸಿ, ಪ್ರಮಾಣೀಕರೀಸಿದ ಬಿತ್ತನೆ ಬೀಜಗಳನ್ನು ಉಪಯೋಗಿಸಬೇಕು. ಮಧ್ಯವರ್ತಿಗಳಿಗೆ ಮಾರು ಹೋಗದೆ ನೇರವಾಗಿ ರೈತರೇ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಲ್ಲಿ ನಷ್ಟ ಎಂಬುದಿರುವುದಿಲ್ಲ ಎಂದರು.

ಸೆಪ್ಟೆಂಬರ್‌ನಿಂದ ರಾಗಿ ಖರೀದಿ ನೋಂದಣಿ

ಇದುವರೆಗೂ ತುಂಬಾ ತಡವಾಗಿ ರಾಗಿ ಖರೀದಿ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಮುಂದಿನ ಸೆಪ್ಟೆಂಬರ್‌ನಿಂದಲೇ ರಾಗಿ ಖರೀದಿ ನೋಂದಣಿ ಆರಂಭಿಸಲಾಗುತ್ತಿದ್ದು, ಡಿಸೆಂಬರ್‌ವರೆಗೆ ನೋಂದಣಿ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

ರೈತರು ನೇರವಾಗಿ ರಾಗಿ ಮಾರಾಟ ಮಾಡಬೇಕು. ಈ ವರ್ಷ 7 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಯ ಗುರಿ ಹೊಂದಿದ್ದೇವೆ. ಸರ್ಕಾರದಿಂದ 4886 ರೂ.ಗಳಿಗೆ ರಾಗಿಯನ್ನು ಖರೀದಿ ಮಾಡಲಾಗುತ್ತಿದೆ. ಯಾರೂ ಮಧ್ಯವರ್ತಿಗಳಿಗೆ ರಾಗಿ ಮಾರಾಟ ಮಾಡಬೇಡಿ. ಕಳೆದ ವರ್ಷಕ್ಕಿಂತ 689 ರೂ. ಹೆಚ್ಚು ಮೊತ್ತವನ್ನು ರಾಗಿಗೆ ಈ ವರ್ಷ ನೀಡಲಾಗುತ್ತಿದೆ ಎಂದರು.

ವಿಶೇಷವಾಗಿ ಈ ಸಾಲಿನಿಂದ ಸಿರಿಧಾನ್ಯ ಖರೀದಿಗೆ ಚಾಲನೆ ನೀಡಲಾಗಿದೆ. ಇದೇ ಮೊದಲ ಬಾರಿಗೆ ಸಿರಿಧಾನ್ಯಗಳನ್ನು ಸರ್ಕಾರದಿಂದ ಖರೀದಿ ಮಾಡಲು ತೀರ್ಮಾನಿಸಲಾಗಿದೆ. ಕಳೆದ ಸಾಲಿನಲ್ಲಿ ರಾಗಿ ಖರೀದಿ ಮಾಡಿದ 700 ಕೋಟಿ ರೂ. ಬಾಕಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರು ಹಾಗೂ ರೈತರ ಪ್ರತಿಭಾನ್ವಿತ ಮಕ್ಕಳನ್ನು ಅಭಿನಂದಿಸಲಾಯಿತು. ಮನ್ಮುಲ್ ಅಧ್ಯಕ್ಷ ಶಿವಪ್ಪ, ಪುರಸಭೆ ಉಪಾಧ್ಯಕ್ಷೆ ವಸಂತಲಕ್ಷ್ಮೀ ಅಶೋಕ್, ಮನ್ಮುಲ್ ನಿರ್ದೇಶಕ ಲಕ್ಷ್ಮೀನಾರಾಯಣ್, ಕೃಷಿ ಇಲಾಖೆ ಜಂಟಿನಿರ್ದೇಶಕ ಅಶೋಕ್, ತಹಸೀಲ್ದಾರ್ ಆದರ್ಶ್, ಪುರಸಭೆ ಸದಸ್ಯ ಸಂಪತ್ತು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮೂಡ್ಲೀಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್ ಇತರರಿದ್ದರು.

ಅಭಿವೃದ್ಧಿಯನ್ನು ಅಳೆದು ತೂಗಿ ಮತ ಹಾಕಿ

ತಾಲೂಕಿಗೆ ಯಾರೂ ಎಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂಬುದನ್ನು ಅರ್ಥ ಮಾಡುಕೊಳ್ಳುವ ವ್ಯವಧಾನ ತಾಲೂಕಿನ ಜನರಿಗಿಲ್ಲವಾಗಿದೆ. ನಿಮ್ಮ ಆಶಿರ್ವಾದದಿಂದ ಅಧಿಕಾರಕ್ಕೆ ಬಂದಿದ್ದೇನೆ. ಆ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ. ಅದಕ್ಕೆ ಎಂದು ನಾನು ಮೋಸ ಮಾಡಿದವನಲ್ಲ. ಆದರೆ ಮತದಾರರು ಯಾರೂ ಎಷ್ಟು ಕೆಲಸ ಮಾಡಿದ್ದಾರೆ? ಯಾವ ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆ? ಎಂದು ಅಳೆದು ತೂಗಿ ಮತ ಹಾಕಲ್ಲ. ಕೆಲಸ ಮಾಡಿದವರನ್ನು, ಏನೂ ಕೆಲಸ ಮಾಡದವರನ್ನು ಇಬ್ಬರನ್ನು ಒಂದೇ ತಕ್ಕಡಿಯಲ್ಲಿ ಹಾಕಿ ಮತ ಹಾಕುತ್ತಿರುವುದು ಬೇಸರ ತರಿಸುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net