ಕೇಂದ್ರದ ಸಾಧನೆ ತಿಳಿಸುವ ಅಭಿಯಾನಕ್ಕೆ ಚಾಲನೆ

13CBP3
Published on

ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ಅವರ ಉತ್ತಮ ಆಡಳಿತ ನೀತಿಯಿಂದ ಭಾರತದ ಶಕ್ತಿ ಹೆಚ್ಚಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಬಣ್ಣಿಸಿದರು.

ನಗರದ ವಾಪಸಂದ್ರದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಶನಿವಾರ ಪೂಜೆ ಸಲ್ಲಿಸಿ, ಕೇಂದ್ರ ಸರ್ಕಾರದ ಸಾಧನೆಯನ್ನು ಮನೆ ಮನೆಗೂ ತಿಳಿಸುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪೈಪೋಟಿಯ ನಡುವೆಯೂ ಭಾರತ ಪ್ರಬಲವಾಗಿ ಬೆಳೆಯುತ್ತಿದೆ. ಮೋದಿಯವರ ಜನಪರ ಕಾರ್ಯಕ್ರಮಗಳು ಮತ್ತು ಆಡಳಿತ ವೈಖರಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದರು.

ಕೇಂದ್ರ ಸರ್ಕಾರವು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮತ್ತು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಸೇರಿ ಹಲವು ದಿಟ್ಟ ನಿರ್ಧಾರಗಳನ್ನು ಕೈಗೊಂಡಿರುವ ಜತೆಗೆ ಎಲ್ಲ ವರ್ಗದ ಹಿತ ಕಾಪಾಡುವ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ, ಸಂಕಷ್ಟದ ಸಂದರ್ಭದಲ್ಲಿ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿದೆ ಎಂದರು.

ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಕಾರ್ಯಕರ್ತರು ಮನೆ ಮನೆಗೂ ತೆರಳಿ ಅರಿವು ಮೂಡಿಸಬೇಕು. ಸಂಘಟನೆಯ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಶ್ರಮಿಸುವಂತೆ ಜಿಲ್ಲಾ ಮಾಜಿ ಅಧ್ಯಕ್ಷ ಡಾ ಜಿ.ವಿ.ಮಂಜುನಾಥ್ ತಿಳಿಸಿದರು.

ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಸಂಪರ್ಕ ಅಭಿಯಾನ ಜಿಲ್ಲಾ ಸಂಯೋಜಕ ನಾಗಭೂಷಣ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸರೆಡ್ಡಿ, ಕಾರ್ಯದರ್ಶಿ ಅಶೋಕ್, ಮಾಧ್ಯಮ್ ಪ್ರಮುಖ ವಿ.ಮಧುಚಂದ್ರ, ನಗರ ಮಂಡಲ ಅಧ್ಯಕ್ಷ ಶ್ರೀನಿವಾಸ್, ಗ್ರಾಮೀಣ ಮಂಡಲ ಅಧ್ಯಕ್ಷ ಕೆ.ಎಸ್.ಕೃಷ್ಣಾರೆಡ್ಡಿ, ಮುಖಂಡರಾದ ಮರಳುಕುಂಟೆ ಕೃಷ್ಣಮೂರ್ತಿ, ಲಕ್ಷ್ಮೀನಾರಾಯಣಗುಪ್ತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net