ಕೇಂದ್ರದ ವಿರುದ್ಧ ಭಾರತ ಕಮ್ಯುನಿಸ್ಟ್ ಪಕ್ಷ ಆಕ್ರೋಶ

DSC_1005 - Copy
Published on

ಮೈಸೂರು: ಕೇಂದ್ರ ಸರ್ಕಾರದ ಬಜೆಟ್ ವಿರೋಧಿಸಿ ಹಾಗೂ ಅದಾನಿ ಸಮೂಹ ಸಂಸ್ಥೆಯ ವಿರುದ್ಧ ಅಕ್ರಮ ವಂಚನೆ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ಜನವಿರೋಧಿಯಾಗಿದ್ದು, ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಾದ ನಿರುದ್ಯೋಗ, ಬಡತನ, ಬೆಲೆ ಏರಿಕೆ ತಡೆಗಟ್ಟುವ ಯಾವುದೇ ಪರಿಹಾರ ಮಾರ್ಗವನ್ನು ಈ ಬಜೆಟ್‌ನಲ್ಲಿ ಘೋಷಣೆ ಮಾಡಿಲ್ಲ. ಕಾರ್ಪೋರೇಟ್ ಹಾಗೂ ಬಂಡವಾಳ ಶಾಹಿಗಳ ಪರವಾಗಿರುವ ಬಿಜೆಪಿ ಸರ್ಕಾರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಈ ಕ್ಷೇತ್ರಗಳ ಅನುದಾನ ಕಡಿತಗೊಳಿಸಿದೆ. ಐಸಿಎಂಆರ್ ಲ್ಯಾಬ್ ಹಾಗೂ ನರ್ಸಿಂಗ್ ಕಾಲೇಜುಗಳನ್ನು ಖಾಸಗಿ ವಲಯಕ್ಕೆ ವಹಿಸಲು ನಿರ್ಧರಿಸಿದೆ ಎಂದು ಆರೋಪಿಸಿದರು.


ಕೇಂದ್ರ ಸರ್ಕಾರ ಈ ಬಜೆಟ್‌ನಲ್ಲಿ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿಲ್ಲ. ಅಸಂಘಟಿತ ಕಾರ್ಮಿಕರ ಸಾಮಾಜಿಕ ಸುರಕ್ಷ ಉದ್ಯೋಗ-ವೇತನಗಳ ಬಗ್ಗೆ ಮೌನವಹಿಸಿದೆ. ಗ್ರಾಮೀಣ ಉದ್ಯೋಗ ಖಾತ್ರಿಯಂತಹ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡದೆ ನಿರ್ಲಕ್ಷಿಸಿದೆ. ಪೆಟ್ರೋಲ್, ಡೀಸೆಲ್, ರಸಗೊಬ್ಬರ ಸೇರಿದಂತೆ ಜನಸಾಮಾನ್ಯರ ನಿತ್ಯ ಬಳಕೆಯ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡಲು ಯಾವ ಪ್ರಸ್ತಾಪವನ್ನೂ ಮಾಡಿಲ್ಲ. ತೀವ್ರವಾದ ಹಣದುಬ್ಬರದಿಂದಾಗಿ ಎಲ್ಲ ವಸ್ತುಗಳ ಬೆಲೆ ಏರಿಕೆಗೆ ಎಡೆಮಾಡಿಕೊಟ್ಟಿದೆ ಎಂದು ಹೇಳಿದರು.

ಸಾರ್ವಜನಿಕ ಕ್ಷೇತ್ರಗಳ ಖಾಸಗೀಕರಣ ಮತ್ತು ಆಸ್ತಿ ನಗಧೀಕರಣದಂತಹ ಪ್ರಕ್ರಿಯೆಗಳ ಭಾಗವಾಗಿ ಬ್ಯಾಂಕ್ ವಿಮಾ ಕ್ಷೇತ್ರಗಳಲ್ಲಿನ ಸಾರ್ವಜನಿಕರ ಸಾವಿರಾರು ಕೋಟಿ ರೂ. ಹೂಡಿಕೆಯನ್ನು ಕಾರ್ಪೋರೇಟ್ ತಿಮಿಂಗಿಲಗಳಿಗೆ ಧಾರೆ ಎರೆಯುತ್ತಿದೆ. ಆಮೆರಿಕಾದ ಹೂಡಿಕೆ ಸಂಸ್ಥೆ ಹಿಂಡನ್ ಬರ್ಗ್ ಕೈಗಾರಿಕೋದ್ಯಮಿ ಗೌತಮ್ ಆದಾನಿ ಸಮೂಹ ಸಂಸ್ಥೆಯ ವಿರುದ್ಧ ಅಕ್ರಮ ವಂಚನೆ ಎಸಗಿರುವ ಬಗ್ಗೆ ಗಂಭೀರ ಆರೋಪ ಮಾಡಿದೆ. ಈಗಾಗಲೇ ಕೋಟ್ಯಂತರ ಭಾರತೀಯರು ಜೀವವಿಮಾ ನಿಗಮದಲ್ಲಿ ಕೂಡಿಟ್ಟಿರುವ ಹಣವನ್ನು ಅದಾನಿ ಸಮೂಹ ಸಂಸ್ಥೆಯಲ್ಲಿ ಕೇಂದ್ರ ಸರ್ಕಾರ ಹೂಡಿಕೆ ಮಾಡಿದೆ ಎಂದು ದೂರಿದರು.

ಕೂಡಲೇ ಕೇಂದ್ರ ಸರ್ಕಾರ ಅದಾನಿ ಸಮೂಹ ಸಂಸ್ಥೆಯ ಮೇಲೆ ಮಾಡಲಾಗಿರುವ ಅರೋಪಗಳ ಬಗ್ಗೆ ಸುಪ್ರೀಂಕೋರ್ಟ್ ಅಥವಾ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕು. ನಿರುದ್ಯೋಗ, ಬಡತನ ನಿವಾರಣೆ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಕೆ ತಡೆಗಟ್ಟಲು ಪರಿಹಾರ ಘೋಷಣೆ ಮಾಡಬೇಕು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಖಾಸಗೀಕರಣ ಮಾಡಬಾರದು. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ರೈತ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಎಚ್.ಆರ್.ಶೇಷಾದ್ರಿ, ಎಚ್.ಬಿ.ರಾಮಕೃಷ್ಣ, ಕೆ.ಎಸ್.ರೇವಣ್ಣ, ಕೆ.ಜಿ.ಸೋಮರಾಜೇಅರಸ್, ಜಗನ್ನಾಥ್, ಎಂ.ಶಿವಣ್ಣ, ಡಿ.ಸುರೇಶ್, ತ್ಯಾಗರಾಜನ್, ರಾಜು, ಶಾಮು ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net