

ಚಿತ್ರದುರ್ಗ: ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ಬದಲು ಕೇಂದ್ರದ ವಿರುದ್ಧ ರಾಜ್ಯ ಬಿಜೆಪಿ ಪ್ರತಿಭಟಿಸಲಿ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಜಿ.ಬಿ. ಬಾಲಕೃಷ್ಣ ಸ್ವಾಮಿ ಸವಾಲು ಹಾಕಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಬೆಲೆ ಏರಿಕೆ, ರಾಜ್ಯಕ್ಕೆ ತೆರಿಗೆ ಪಾಲು ನೀಡದ ಕೇಂದ್ರದ ವಿರುದ್ಧ ಬಿಜೆಪಿ ನಾಯಕರು ಜನಾಕ್ರೋಶ ಯಾತ್ರೆ ನಡೆಸಬೇಕಿದೆ ಎಂದರು.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನಿತ್ಯಅಗತ್ಯವಸ್ತುಗಳ ಬೆಲೆ ಏರಿಸುವ ಮೂಲಕ ಬಡ ಹಾಗೂ ಮಧ್ಯಮ ವರ್ಗದವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು, ಕೇಂದ್ರ ಹಣಕಾಸು ಆಯೋಗದ ಅನುದಾದಲ್ಲೂ ರಾಜ್ಯಕ್ಕೆ ವಂಚನೆಯಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಮಾತನಾಡಿ, ಕೇಂದ್ರದ ವಿರುದ್ಧ ಕಾಂಗ್ರೆಸ್ ಏ.17ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜನಾಕ್ರೋಶ ಯಾತ್ರೆ ನಡೆಸಲಿದೆ. ಚಿತ್ರದುರ್ಗದ ಆರು ತಾಲೂಕಿನ ವಿವಿಧ ಘಟಕಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಕೆಪಿಸಿಸಿ ಕಾರ್ಯದರ್ಶಿ ಚಂದ್ರಶೇಖರ್ ಏ.19 ರಂದು ಚಿತ್ರದುರ್ಗಕ್ಕೆ ಭೇಟಿ ನೀಡಿ ಜಿಪಂ, ತಾಪಂ ಚುನಾವಣೆ ಟಿಕೆಟ್ ಆಕಾಂಕ್ಷಿಗಳ ಜತೆ ಸಮಾಲೋಚನೆ ನಡೆಸಲಿದ್ದಾರೆ ಎಂದರು.
‘ಸರ್ಕಾರದ ನಡೆ ಕಾರ್ಯಕರ್ತರ ಕಡೆಗೆ’ ಕಾರ್ಯಕ್ರಮ ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು ತಾಲೂಕುಗಳಲ್ಲಿ ನಡೆದಿದೆ. ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲೂಕುಗಳಲ್ಲಿ ಸದ್ಯದಲ್ಲೇ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಕೆ.ಎಂ. ಹಾಲಸ್ವಾಮಿ, ಕೆ.ಪಿ. ಸಂಪತ್‌ಕುಮಾರ್, ಮಧುಪಾಲೇಗೌಡ, ಖಾಸಿಂ ಆಲಿ ಇದ್ದರು.