

ಚಿತ್ರದುರ್ಗ: ರಾಜ್ಯದ ಅಭಿವೃದ್ಧಿ ವಿಚಾರವಾಗಿ ಕೇಂದ್ರ ಸರ್ಕಾರದ ಯೋಜನೆಗಳಿಗೆ ಸ್ಪಂದಿಸುತ್ತೇವೆ. ಆದರೆ, ಸಂಬಂಧಪಟ್ಟ ಇಲಾಖೆ ಅಥವಾ ಸರ್ಕಾರದ ಗಮನಕ್ಕೆ ತರುವುದರಿಂದ ಸಹಕರಿಸಲು ಅನುಕೂಲವಾಗಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶರವಾತಿ ಕಣಿವೆಯ ಅಂಬಾರಗೋಡ್ಲು-ಕಳಸವಳ್ಳಿ ತೂಗುಸೇತುವೆಯನ್ನು ಜು. 14ರಂದು ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆಗೊಳಿಸಲಿದ್ದು, ಅವರಿಗೆ ಗೌರವಿಸುವ ಸಲುವಾಗಿ ಸಿಎಂ ಪರವಾಗಿ ನಾನು ಹಾಜರಾಗುತ್ತಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯ ಅವರಿಗೆ ತಡವಾಗಿ ಆಹ್ವಾನ ಬಂದಿದೆ. ಆದರೆ, ಇದಕ್ಕೂ ಮೊದಲೇ ಇಂಡಿ ಕ್ಷೇತ್ರದಲ್ಲಿ ಕಾರ್ಯಕ್ರಮ ನಿಗದಿಯಾಗಿದೆ. ಇದರಲ್ಲಿ ರಾಜಕೀಯ ಮಾಡುವ ಪ್ರಶ್ನೆ ಎಲ್ಲಿಂದ ಬಂತು. ಕೇಂದ್ರದ ಯಾವುದೇ ಯೋಜನೆಯಾಗಲಿ ರಾಜ್ಯ ಸರ್ಕಾರದ ಗಮನಕ್ಕೂ ತರಬೇಕೆಂದು ಕೇಳಿಕೊಂಡಿದ್ದೇವೆ ಎಂದರು.
ರಾಜ್ಯದಲ್ಲಿ ಮತ್ತೆ ಅಧಿಕಾರ ಪಡೆಯಲು ಬಿಜೆಪಿಯವರು 55 ಕಾಂಗ್ರೆಸ್ ಶಾಸಕರನ್ನು ಗುರಿಯಾಗಿಸಿ, ಆಪರೇಷನ್‌ಗೆ ಮುಂದಾಗಿರುವುದಾಗಿ ವಿಜಯಾನಂದ ಕಾಶಪ್ಪನವರ್ ನೀಡಿರುವ ಹೇಳಿಕೆ ಪತ್ರಿಕೆಗಳಲ್ಲಿ ಗಮನಿಸಿದ್ದೇನೆ. ಆ ಬಗ್ಗೆ ನನಗೆ ಗೊತ್ತಿಲ್ಲ. ಕಾಶಪ್ಪನವರೇ ಸಂಪೂರ್ಣ ಮಾಹಿತಿ ನೀಡಿದರೆ ಒಳ್ಳೆಯದು ಎಂದರು.