ಕೇಂದ್ರದ ಯೋಜನೆ ಪ್ರಗತಿ ಪರಿಶೀಲನೆ

11CBP3
Published on

ಚಿಕ್ಕಬಳ್ಳಾಪುರ : ಕೇಂದ್ರ ಸರ್ಕಾರದ ರಾಷ್ಟ್ರೀಯ ಕಾರ್ಯಕ್ರಮ ಉಸ್ತುವಾರಿ ಮತ್ತು ಪರಿಶೀಲನಾ ಸಮಿತಿ ಜಿಲ್ಲೆಯ ವಿವಿಧೆಡೆ ಬುಧವಾರ ಭೇಟಿ ನೀಡಿ, ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿತು.

ಗೌರಿಬಿದನೂರು ತಾಲೂಕಿನ ರಮಾಪುರದಲ್ಲಿ ಜಲಾಮೃತ ಯೋಜನೆಯಡಿ ಕರ್ನಾಟಕ ನಕ್ಷೆ ಮಾದರಿಯಲ್ಲಿ ನಿರ್ಮಾಣಗೊಂಡ ಗೋಕುಂಟೆ, ಶಿಡ್ಲಘಟ್ಟ ತಾಲೂಕಿನ ಈ ತಿಮ್ಮಸಂದ್ರ ಗ್ರಾಪಂವ್ಯಾಪ್ತಿಯ ಎಸ್.ಎಂ.ಕೊಂಡರಾಜನಹಳ್ಳಿಯ ಮಾದರಿ ಅಂಗನವಾಡಿ , ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಉದ್ಯಾನ ಸೇರಿ ಜಿಲ್ಲೆಯ 10 ಗ್ರಾಪಂಗಳಿಗೆ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿ, ನರೇಗಾ, ವಸತಿ, ಪಿಎಂಜಿಎಸ್‌ವೈ, ಸ್ವಚ್ಛ ಭಾರತ್ ಅಭಿಯಾನ, ವಸತಿ ಜಿಪಂ ವಿಶೇಷ ಅನುದಾನ ಸೇರಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಿದರು. ಬಳಿಕ ಜಿಪಂ ಸಭಾಂಗಣದಲ್ಲಿ ಇಲಾಖೆಯ ಸಾಧನೆಯ ಅಂಕಿ ಅಂಶಗಳ ಬಗ್ಗೆ ಮಾಹಿತಿ ಪಡೆಯಿತು.

ಅಂಗನವಾಡಿ ಕೇಂದ್ರಗಳಿಗೆ ಬೇಬಿ ಸಿಟ್ಟಿಂಗ್ ಸೆಂಟರ್ ರೀತಿಯಲ್ಲಿ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಕೇಂದ್ರದ ಗೋಡೆಗಳ ಮೇಲೆ ಬಣ್ಣದೊಂದಿಗೆ ಕಲಿಕೆ ಪ್ರೇರಣೆಯ ಕಲಾಕೃತಿಗಳ ರಚನೆ, ಮಕ್ಕಳಿಗೆ ಸಮವಸ್ತ್ರ, ಕಲಿಕೋಪಕರಣಗಳು ವಿತರಣೆ, ಮೂಲ ಸೌಕರ್ಯ ಒದಗಿಸುವ ಮೂಲಕ ಆಕರ್ಷಕ ರೂಪ ನೀಡಲಾಗುತ್ತಿದೆ. ಹಾಗೆಯೇ ನರೇಗಾ ಯೋಜನೆಯಡಿ ಮಾದರಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಜಿಪಂ ಸಿಇಒ ಶಿವಶಂಕರ್ ತಿಳಿಸಿದರು.

ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಲಾಗಿದೆ. ಇದರ ಜತೆಗೆ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ವಿಸ್ತರಣೆಯಲ್ಲಿ ಮಹತ್ವದ ಸಾಧನೆ ತೋರಲಾಗಿದೆ. ಕಾರ್ಯಕ್ರಮದ ಅನುಷ್ಠಾನದಲ್ಲಿ ಜಿಲ್ಲೆಯು ಮುಂಚೂಣಿಯಲ್ಲಿದೆ ಎಂದು ಹೇಳಿದರು. ಜಿಪಂ ಉಪ ಕಾರ್ಯದರ್ಶಿ ಮಾಧುರಾಮ್, ಯೋಜನಾಧಿಕಾರಿ ಧನು ರೇಣುಕಾ, ತಾಪಂ ಇಒಗಳಾದ ಹರ್ಷವರ್ಧನ್, ಮುನಿರಾಜು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net