

ಬೀದರ್: ಹುಲಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 2022-23ರಲ್ಲಿ ಮಂಜೂರಾದ ಸುಮಾರು 60 ಕೋಟಿ ರೂ. ಪೈಕಿ 30 ಕೋಟಿ ಬಾಕಿ ಬರಬೇಕಿದ್ದು, ಕೂಡಲೇ ಬಿಡುಗಡೆ ಮಾಡುವಂತೆ ಅರಣ್ಯ, ಜೀವಿಶಾಸ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ
ನವದೆಹಲಿಯಲ್ಲಿ ಮಂಗಳವಾರ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿದ ಖಂಡ್ರೆ, ಹುಲಿ ಯೋಜನೆಯಡಿ ಕಾಳಿ, ಭದ್ರಾ, ನಾಗರಹೊಳೆ, ಬಂಡಿಪುರ ಮತ್ತು ಬಿಳಿಗಿರಿ ರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಹೊಸ ಕಾಮಗಾರಿಗಳನ್ನು ಕೈಗೊಳ್ಳಲು 61 ಕೋಟಿ ರೂ. ಸೇರಿ ಒಟ್ಟಾರೆ 91.99 ಕೋಟಿ ರೂ. ಬಿಡುಗಡೆ ಮಾಡುವಂತೆ ಕೋರಿದ್ದಾರೆ. ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಅರಣ್ಯ ರಕ್ಷಣೆ ಮತ್ತು ವಿಸ್ತರಣೆಗಾಗಿ ಕಾಂಪಾ ನಿಧಿಯಡಿ 2023-24ರಲ್ಲಿ ರಾಜ್ಯದಿಂದ ಸುಮಾರು 362 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಪೈಕಿ 140 ಕೋಟಿ ರೂ.ಗೆ ಮಾತ್ರ ಮಂಜೂರಿ ಸಿಕ್ಕಿದೆ. ಉಳಿದ 222 ಕೋಟಿ ಬಾಕಿ ನಿ ಮಂಜೂರಿಗೂ ಮನವಿ ಮಾಡಿದ್ದು, ಅಗತ್ಯವಾದ ಎಲ್ಲ ನಿಬಂಧನೆಗಳನ್ನು ಪೂರೈಸಲಾಗುವುದು. ನಗರ-ವನ ಯೋಜನೆ ಅಡಿ ರಾಜ್ಯದ 9 ನಗರಗಳಿಗಾಗಿ 26.70 ಕೋಟಿ ರೂ.ಗೆ ಅನುಮೋದನೆ ನೀಡುವಂತೆಯೂ ಕೇಂದ್ರ ಸಚಿವರಿಗೆ ಕೋರಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಖಂಡ್ರೆ ತಿಳಿಸಿದ್ದಾರೆ.