ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಪರಿಸರ ಮತ್ತು ಅರಣ್ಯ ಸಂಬಂಧಿ ಅನುಮೋದನೆ ನೀಡಲು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೆಂದರ ಯಾದವ್ ಹಾಗೂ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸರ್ವೆಚ್ಚ ನ್ಯಾಯಾಲಯದಲ್ಲಿ ಏ. 8ರಂದು ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್) ಹೂಡಿದ್ದೇವೆ ಎಂದು ರೈತ ಸೇನಾ ಕರ್ನಾಟಕ ಅಧ್ಯಕ್ಷ ವಿರೇಶ ಸೊಬರದಮಠ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಧೀಕರಣವು ಕರ್ನಾಟಕಕ್ಕೆ 3.9 ಟಿಎಂಸಿ ನೀರು ಹಂಚಿಕೆ ಮಾಡಿದೆ. ಹೀಗಿರುವಾಗ ಯೋಜನೆಗೆ ಸಂಬಂಧಿಸಿದಂತೆ ಕಾಮಗಾರಿ ಆರಂಭಿಸಲು ಪರಿಸರ ಮತ್ತು ಅರಣ್ಯ ಸಂಬಂಧಿ ಅನುಮೋದನೆ ನೀಡಲು ವಿಳಂಬ ಮಾಡುತ್ತಿರುವುದು ಸರಿಯಲ್ಲ. ಹೀಗಾಗಿ ನಾವು ಕಾನೂನು ಹೋರಾಟ ಆರಂಭಿಸಿದ್ದೇವೆ ಎಂದರು.
ಇದರ ಜತೆ ಶೀಘ್ರದಲ್ಲೇ ಸುಮಾರು 500 ರೈತರೊಂದಿಗೆ ದೆಹಲಿಯ ರಾಷ್ಟ್ರಪತಿ ಭವನದ ಎದುರು ಪರೇಡ್, ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ. ಅಲ್ಲದೇ, ದಯಾಮರಣಕ್ಕೆ ಕೋರಿ ರಾಷ್ಟ್ರಪತಿಯವರಿಗೆ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಗೋವಾ ತಮ್ನಾರ್ ಪವರ್ ಪ್ರಾಜೆಕ್ಟ್ಗೆ ಪರಿಸರ ಸಂಬಂಧಿ ಪರವಾನಿಗೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆಯುತ್ತಾರೆ. ಆದರೆ, ಅವರು ಮಹದಾಯಿ ವಿಚಾರದಲ್ಲಿ ಗೋವಾ ಸರ್ಕಾರಕ್ಕೆ ಪತ್ರ ಬರೆದು ಮನವರಿಕೆ ಮಾಡುವುದಿಲ್ಲ. ನ್ಯಾಯಾಧೀಕರಣದ ಆದೇಶವಾದ ಮೇಲೆ ಸ್ಥಳೀಯ ಪರಿಸರ ವಾದಿಗಳು ವಿರೋಧ ಮಾಡುವುದು ಸರಿಯಲ್ಲ. ಪರಿಸರವಾದಿಗಳ ವಿರೋಧದ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ಸಾಕಷ್ಟು ಗಿಡಗಳನ್ನು ಬೆಳೆಸಿದ್ದೇವೆ ಎಂದು ಹೇಳಿದರು.