

ಆನೇಕಲ್: ಕೇಂದ್ರ ಮತ್ತು ರಾಜ್ಯ ಸರ್ಕಾರದ ದುರಾಡಳಿತದಿಂದ ಜನಸಾಮಾನ್ಯರು ಪರದಾಡುವಂತಾಗಿದೆ. ಕೇಂದ್ರ ಸರ್ಕಾರದ ನೀತಿಗಳು ಜನರ ಬದಕನ್ನು ದುಸ್ತರಗೊಳಿಸಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಚಂದಾಪುರ ಸೂರ್ಯ ಸಿಟಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದ ಬಿಜೆಪಿ ಇರುವ ಹುದ್ದೆಗಳನ್ನೇ ಕಡಿತ ಮಾಡಿ ಖಾಸಗೀಕರಣಕ್ಕೆ ಒತ್ತು ನೀಡುತ್ತಿದೆ. ಕಪ್ಪು ಹಣ ವಾಪಸು ತರುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಯ್ದೆಗಳನ್ನು ವಿರೋಧಿಸಿ ನೂರಕ್ಕೂ ಹೆಚ್ಚು ದಿನಗಳಿಂದ ಕೃಷಿ ರೈತರು ಪ್ರತಿಭಟನೆ ಮಾಡುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಸಮಸ್ಯೆ ಆಲಿಸಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿಗೆ ರೈತರು ತಕ್ಕ ಪಾಠ ಕಲಿಸುತ್ತಾರೆ ಎಂದರು.
ಸಂಸದ ಡಿ.ಕೆ. ಸುರೇಶ್ ಮಾತನಾಡಿ, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಮೀಸಲಾತಿ ಹೋರಾಟ ಹೆಚ್ಚಾಗಿವೆ. ಪ್ರಬಲ ಸಮುದಾಯಗಳು ಮೀಸಲಾತಿಗಾಗಿ ಒತ್ತಾಯ ಮಾಡುತ್ತಿವೆ. ಆರ್‌ಎಸ್‌ಎಸ್ ಪ್ರಭಾವದಿಂದಾಗಿ ಈ ಹೋರಾಟಗಳು ನಡೆಯುತ್ತಿವೆ. ಇದರಿಂದ ಮೀಸಲಾತಿಯ ಮೂಲಉದ್ದೇಶಕ್ಕೆ ಧಕ್ಕೆ ಒದಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಬಿ. ಶಿವಣ್ಣ ಮಾತನಾಡಿ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅಭಿವೃದ್ಧಿ ಪರ್ವ ಆರಂಭವಾಗಿತ್ತು. ಹಲವು ಜನಪ್ರಿಯ ಕಾರ್ಯಕ್ರಮಗಳ ಮೂಲಕ ಜನಸ್ನೇಹಿಯಾಗಿದ್ದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಕುಂಠಿತವಾಗಿದೆ ಎಂದು ದೂರಿದರು.
ಕೆಪಿಸಿಸಿ ಕಾರ್ಯದರ್ಶಿ ಎಂ. ಬಾಬು, ಆನೇಕಲ್ ಪುರಸಭೆ ಅಧ್ಯಕ್ಷ ಎನ್.ಎಸ್. ಪದ್ಮನಾಭ, ಗ್ರಾಪಂ ಅಧ್ಯಕ್ಷರಾದ ನಾರಾಯಣರೆಡ್ಡಿ, ಶಾಂತಮ್ಮ ಭೈರಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಪ್ಪ, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ದೊಡ್ಡಹಾಗಡೆ ಹರೀಶ್, ಮುಖಂಡರಾದ ಅಚ್ಯುತರಾಜು, ಪುರುಷೋತ್ತಮ್, ಕೆಂಪರಾಜು, ಬಳ್ಳೂರು ಮುನಿವೀರಪ್ಪ, ಬಿ.ಪಿ. ರಮೇಶ್, ಸೋಮಶೇಖರರೆಡ್ಡಿ, ಸರ್ಜಾಪುರ ಶ್ರೀರಾಮ್, ಪುಷ್ಪರಾಜು, ಮಹದೇವಪ್ಪ, ಬಳ್ಳೂರು ನಾರಾಯಸ್ವಾಮಿ, ರಾಮಚಂದ್ರರೆಡ್ಡಿ, ಸುಶೀಲಮ್ಮ, ನಾಗವೇಣಿ, ಲಿಂಗಣ್ಣ, ಪ್ರಭಾಕರರೆಡ್ಡಿ, ಅಂಬರೀಷ್, ಮನೋಹರ್ ಇದ್ದರು.
ಸಿಡಿ ಪ್ರಕರಣ ಮುಚ್ಚಿಹಾಕಲು ಯತ್ನ: ಸಿಡಿ ಪ್ರಕರಣದಲ್ಲಿ ಬಿಜೆಪಿಯವರು ರಮೇಶ್ ಜಾರಕಿಹೋಳಿ ಅವರ ಬೆನ್ನಿಗೆ ನಿಂತು ಅಪಮಾನವಾಗಿರುವ ಹೆಣ್ಣುಮಗಳ ಬಗ್ಗೆ ಚರ್ಚೆ ಮಾಡದೆ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಪ್ಪಿಸಿದೆ. ತನ್ಮೂಲಕ ಪ್ರಕರಣವನ್ನು ಮುಚ್ಚಿಹಾಕುವ ಕುತಂತ್ರ ರೂಪಿಸಿದೆ ಎಂದು ಸಂಸದ ಡಿ.ಕೆ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಹಿಂದುತ್ವ, ಸಂಸ್ಕೃತಿ ಹಾಗೂ ಹಿಂದು ಮಹಿಳೆಯರ ಹೆಸರಲ್ಲಿ ರಾಜಕೀಯ ಮಾಡುತ್ತಿದೆ. ಯಾರು ಸಿಡಿ ಮಾಡಿದ್ದಾರೆ ಎಂದು ಚರ್ಚಿಸುವುದಲ್ಲ. ಬದಲು ಸಿಡಿಯಲ್ಲಿ ಯಾರು ಇಂಥ ನೀಚ ಕೆಲಸ ಮಾಡಿದ್ದಾರೆಂದು ಚರ್ಚೆಯಾಗಬೇಕು ಎಂದರು.