ಕೇಂದ್ರದ ಕುತಂತ್ರ ಮೆಟ್ಟಿ ನಿಲ್ಲುವುದು ಅಗತ್ಯ

Published on

ಧಾರವಾಡ: ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ 126 ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಇಂಥ ಕುತಂತ್ರಗಳನ್ನು ಮೆಟ್ಟಿ ನಿಲ್ಲಬೇಕಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶಸಿಂಗ್ ಟಿಕಾಯತ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಹಿತರಕ್ಷಣಾ ಪರಿವಾರದಿಂದ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಹಮ್ಮಿಕೊಂಡಿದ್ದ ಸತ್ಯಾಗ್ರಹದಲ್ಲಿ ಬುಧವಾರ ಅವರು ಮಾತನಾಡಿದರು. ರೈತರು, ಕೂಲಿ ಕಾರ್ವಿುಕರು, ಬಡವರು ಸಂಕಷ್ಟದಲ್ಲಿದ್ದಾರೆ. ಸರ್ಕಾರಿ ಸ್ವಾಮ್ಯದ ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸುವ ಹುನ್ನಾರ ನಡೆಯುತ್ತಿದೆ ಎಂದು ಹೇಳಿದರು.

ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ ಮಾತನಾಡಿ, ರೈತ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯದಿದ್ದರೆ ದೇಶದ ಎಲ್ಲ ಭಾಗಗಳ ರೈತರು ದೆಹಲಿ ಚಲೋ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.

ಹೋರಾಟಗಾರ ಯುದ್ಧವೀರಸಿಂಗ್, ಪ್ರಗತಿಪರ ಚಿಂತಕ ಡಾ. ಗಣೇಶ ಎನ್. ದೇವಿ, ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಕೆ.ಟಿ. ಗಂಗಾಧರ, ಕುರಬೂರ ಶಾಂತಕುಮಾರ, ಮಂಜೇಗೌಡ, ಮಾಜಿ ಶಾಸಕರಾದ ಬಿ.ಆರ್. ಪಾಟೀಲ, ಶ್ರೀಶೈಲಪ್ಪ ಬಿದರೂರ, ಶ್ರೀಶೈಲಗೌಡ ಕಮತರ, ಗುರುರಾಜ ಹುಣಸಿಮರದ, ಶಿವಾನಂದ ಹೊಳೆಹಡಗಲಿ, ಮಲ್ಲನಗೌಡ ಪಾಟೀಲ, ಭೀಮಪ್ಪ ಕಾಸಾಯಿ ಹಾಗೂ ವಿವಿಧ ಜಿಲ್ಲೆಗಳ ರೈತ ಮುಖಂಡರು ಪಾಲ್ಗೊಂಡಿದ್ದರು.

ರೈತ ಹಿತರಕ್ಷಣಾ ಪರಿವಾರದ ಸಂಚಾಲಕ ಪಿ.ಎಚ್. ನೀರಲಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದಣ್ಣ ಕಂಬಾರ ನಿರೂಪಿಸಿದರು.

ಚೌಚೌ ಬಾತ್ ಉಪಾಹಾರ

ಗಾಂಧಿ ಪ್ರತಿಮೆ ಇರುವ ಉದ್ಯಾನದಲ್ಲಿ ರಾಷ್ಟ್ರೀಯ ರೈತ ನಾಯಕರಾದ ರಾಕೇಶಸಿಂಗ್ ಟಿಕಾಯತ್, ಯುದ್ಧವೀರಸಿಂಗ್, ಇತರರು ಈ ಭಾಗದ ಹೋಳಿಗೆ, ಚೌಚೌ ಬಾತ್ ಉಪಾಹಾರ ಸವಿದರು. 60 ದಿನಗಳಿಂದ ಸರದಿ ಧರಣಿ ನಡೆಸುತ್ತಿದ್ದ ನೀರಲಕೇರಿ, ಇತರರು ಧರಣಿಯನ್ನು ಮೊಟಕುಗೊಳಿಸಿದರು.

ಕಾಪೋರೇಟ್ ಕಂಪನಿಗಳಿಗೆ ಜೀತದಾಳು ಮಾಡುವ ಹುನ್ನಾರ

ರೈತರನ್ನು ಕಾಪೋರೇಟ್ ಕಂಪನಿಗಳಿಗೆ ಜೀತದಾಳುಗಳನ್ನಾಗಿಸಲು ಹೊರಟಿದೆ. ಈ ಹುನ್ನಾರ ಫಲಿಸದು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ರಾಕೇಶ್​ಸಿಂಗ್ ಟಿಕಾಯತ್ ಹೇಳಿದರು.

ಧಾರವಾಡ ನಗರದ ಕಲಾಭವನ ಮೈದಾನದಲ್ಲಿ ರೈತ ಹಾಗೂ ಸಾಮಾಜಿಕ ಹೋರಾಟ ಸಂಘಟನೆಗಳು ಬುಧವಾರ ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು. ದೇಶದ ಯುವ ಜನತೆ ಎಚ್ಚೆತ್ತುಕೊಳ್ಳದಿದ್ದರೆ ಜಮೀನು ಕಳೆದುಕೊಳ್ಳುವ ಸ್ಥಿತಿ ಎದುರಾಗಲಿದೆ. ಕಾಪೋರೇಟ್ ಕಂಪನಿಗಳು ಆಹಾರ ಧಾನ್ಯವನ್ನು ಗೋದಾಮಿನಲ್ಲಿಟ್ಟು ಹಸಿವಿನ ಮಾರಾಟಕ್ಕೆ ಮುಂದಾಗಿವೆ. ಮತ್ತೊಂದೆಡೆ ಕೇಂದ್ರ ಸರ್ಕಾರ ಕಾನೂನು ಜಾರಿಗೆ ತಂದು ಸಹಕರಿಸುತ್ತಿದೆ. ಕೇಂದ್ರ ಸರ್ಕಾರ ಎಪಿಎಂಸಿ ಹೊರಗೆ ಬೆಳೆ ಮಾರಾಟ ಮಾಡಬಹುದು ಎನ್ನುತ್ತಿದೆ. ಹಾಗಾದರೆ, ಮಧ್ಯಪ್ರದೇಶ, ಇತರ ರಾಜ್ಯಗಳಲ್ಲಿ ರೈತರಿಗಾದ ವಂಚನೆ ಕಾಣುವುದಿಲ್ಲವೇ ಎಂದು ಪ್ರಶ್ನಿಸಿದರು. ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಮಾತನಾಡಿ, ಕೇಂದ್ರ ಸರ್ಕಾರದ ಮೂರು ಕರಾಳ ಕಾಯ್ದೆಗಳ ವಿರುದ್ಧ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ 2ನೇ ಸ್ವಾತಂತ್ರ್ಯ ಸಂಗ್ರಾಮ ಎಂದರು. ರೈತ ಮಹಿಳೆಯರು ಹೋರಾಟಗಾರರಿಗೆ ಆರತಿ ಬೆಳಗಿ ಶುಭ ಕೋರಿದರು. ಇದಕ್ಕೂ ಮೊದಲು ರೈತ ಮುಖಂಡರು ಬಸವೇಶ್ವರ, ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net