

ಹುಬ್ಬಳ್ಳಿ: ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ಪ್ರಮಾಣ ಪತ್ರ ವಿತರಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ವಾಮಿತ್ವ ಯೋಜನೆಗೆ ಚಾಲನೆ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ವರ್ಷಗಳಿಂದ ವಾಸ ಮಾಡಿರುವ ತಮ್ಮ ಜಾಗದ ದಾಖಲೆ ಹೊಂದಿರದವರಿಗೆ ಪ್ರಮಾಣ ಪತ್ರ ನೀಡುವ ಯೋಜನೆ ಇದಾಗಿದೆ. ಈ ಪೈಲಟ್ ಯೋಜನೆಯನ್ನು ಧಾರವಾಡ ಜಿಲ್ಲೆಯಲ್ಲಿ 67 ಗ್ರಾಮ ಪಂಚಾಯಿತಿಗಳಲ್ಲಿ 160 ಗ್ರಾಮಗಳನ್ನು ಗುರುತಿಸಿ, 94419 ಆಸ್ತಿಗಳನ್ನು ಡ್ರೋನ್ ಕ್ಯಾಮರಾ ಮೂಲಕ ಸರ್ವೆ ಮಾಡುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಈ ಯೋಜನೆಯ ಆಸ್ತಿ ಪ್ರಮಾಣಪತ್ರಗಳು ಹಳ್ಳಿಗರ ಮನೆ ಮತ್ತು ಅವರು ಹೊಂದಿರುವ ಸುತ್ತಮುತ್ತಲಿನ ಪ್ರದೇಶಗಳ ಆಸ್ತಿ ಪ್ರಮಾಣ ಪತ್ರಗಳ ಭೌತಿಕ ಪ್ರತಿಗಳಾಗಲಿವೆ. ಏಪ್ರಿಲ್ನಲ್ಲಿ ಆರಂಭಿಸಿದ ಸ್ವಾಮಿತ್ವ ಯೋಜನೆ ಗ್ರಾಮೀಣ ಜನರು ಆಸ್ತಿಯನ್ನು ಆರ್ಥಿಕ ಆಸ್ತಿಯಾಗಿ ಬಳಸಲು ಅವಕಾಶ ನೀಡಲಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದ ಆಸ್ತಿಗಳನ್ನು ಡ್ರೋನ್ ತಂತ್ರಜ್ಞಾನದಿಂದ ಭೂಮಾಪನ ಮಾಡಿಸಿ, ಆಸ್ತಿ ಪ್ರಮಾಣ ಪತ್ರವನ್ನು ಮಾಲೀಕರಿಗೆ ವಿತರಿಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ವಿತರಿಸಲು ಸೂಚಿಸಲಾಗಿದೆ. ಗ್ರಾಮೀಣ ಜನರ ಆಸ್ತಿಗಳು ಸಂಪೂರ್ಣ ಡಿಜಿಟಲೀಕರಣಗೊಳ್ಳಲಿವೆ. ಆಸ್ತಿ ಪ್ರಮಾಣ ಪತ್ರ ಭೌತಿಕ ವಿತರಣೆ ಪ್ರಾರಂಭಿಸುವುದು ಸ್ವಾವಲಂಬಿ ಭಾರತದ ಮತ್ತೊಂದು ಐತಿಹಾಸಿಕ ಹೆಜ್ಜೆಯಾಗಿದೆ. ಯೋಜನೆಯು ನಿಖರವಾದ ಭೂ ದಾಖಲಾತಿಗಳನ್ನು ರಚಿಸುವುದು, ಆಸ್ತಿ-ಸಂಬಂಧಿತ ವಿವಾದಗಳನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಜನರ ಆಸ್ತಿಗಳ ಬಗ್ಗೆ ಸರಿಯಾದ ದಾಖಲೆಗಳಿದ್ದರೆ, ಯಾವುದೇ ಬ್ಯಾಂಕ್ ಅವರಿಗೆ ಸಾಲವನ್ನು ನಿರಾಕರಿಸುವಂತಿಲ್ಲ. ಈ ಯೋಜನೆ ಗ್ರಾಮಸ್ಥರಿಗೆ ಸಾಲ ತೆಗೆದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ ಎಂದೂ ತಿಳಿಸಿದ್ದಾರೆ.