

ಆಲಮಟ್ಟಿ: ಒಳಮೀಸಲಾತಿ ಜಾರಿ ಮಾಡುವುದು ಕೇಂದ್ರದ ಕರ್ತವ್ಯ, ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದನ್ನು ತಪ್ಪು ಎನ್ನುತ್ತಿರುವ ಮಾಜಿ ಸಚಿವ ಗೋವಿಂದ ಕಾರಜೋಳ ಅವರ ಹೇಳಿಕೆ ದಲಿತರನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರ ಶ್ರೀನಿವಾಸ ಹೇಳಿದರು.
ಇಲ್ಲಿಯ ಕರ್ನಾಟಕ ಗಾಂಧಿ ಮಂಜಪ್ಪ ಹರ್ಡೇಕರ ಸ್ಮಾರಕದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎರಡು ದಿನದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರವೇ ಸಂವಿಧಾನದ 341(3) ಕ್ಕೆ ತಿದ್ದುಪಡಿ ತಂದು ಒಳಮೀಸಲಾತಿ ಜಾರಿಗೆ ತಂದರೆ ಅದಕ್ಕೆ ಕಾನೂನು ಮಾನ್ಯತೆ ಸಿಗುತ್ತದೆ. ಇದು ನಮ್ಮ ಹಲವು ದಶಕಗಳ ಬೇಡಿಕೆಯಾಗಿದೆ ಎಂದರು.
ಯಾವುದೇ ಅರ್ಜಿಯನ್ನು ಹಾಕದೆ ಕೇಂದ್ರ ಸರ್ಕಾರ ಶೇ.10 ರಷ್ಟು ಇಡಬ್ಲುೃಎಸ್ ಮೀಸಲಾತಿ ಜಾರಿಗೆ ತಂದಿತು. ಒಳಮೀಸಲಾತಿಗಾಗಿ ನಿರಂತರ ಹೋರಾಟ ನಡೆಸಿದರೂ ಅದಕ್ಕೆ ಸ್ಪಂದಿಸುತ್ತಿಲ್ಲ. ಒಳಮೀಸಲಾತಿ ಜಾರಿಗಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಸರಿಯಾಗಿದೆ. ಕೇಂದ್ರವೇ ಇದನ್ನು ಅನುಷ್ಠಾನಕ್ಕೆ ತರಬೇಕು ಎಂದರು.
ವಿಧಾನಪರಿಷತ್ ಸದಸ್ಯ ಎಚ್.ಪಿ. ಸುಧಾಮದಾಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಯೋಧ್ಯೆ ವಿಷಯವನ್ನಿಟ್ಟುಕೊಂಡು ರಾಮರಾಜ್ಯ ಸೃಷ್ಟಿಸಲಾಗಿದೆ ಎನ್ನುವ ಭ್ರಮೆಯನ್ನು ಬಿಜೆಪಿ ಹಾಗೂ ಸಂಘ ಪರಿವಾರದವರು ಹುಟ್ಟುಹಾಕಿದ್ದಾರೆ. ಈ ಬಗ್ಗೆ ಯುವಕರು, ಪ್ರಜ್ಞಾವಂತರು ಜಾಗೃತರಾಗಬೇಕು ಎಂದರು.
ಸಿಂದಗಿಯ ಸಂಗಪಾಲ ಬಂತೇಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ರಾಜ್ಯ ಸಂಘಟನಾ ಸಂಚಾಲಕರಾದ ವಿಜಯನರಸಿಂಹ, ಸೂಲಿಕುಂಟೆ ರಮೇಶ, ಎಸ್.ವಿಘ್ನೇಶ, ಸತ್ಯಭದ್ರಾವತಿ, ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ಪ್ರಧಾನ ಸಂಚಾಲಕ ಬಸವರಾಜ ಕೌತಾಳ, ಅಂಬಣ್ಣ ಅರೋಳಿಕರ, ರಾಜ್ಯ ದಲಿತ ನೌಕರರ ಒಕ್ಕೂಟದ ಅಧ್ಯಕ್ಷ ಜೆ.ಶ್ರೀನಿವಾಸಲು, ದಲಿತಾ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ರೇಣುಕಾ ಮಾದರ, ಪ್ರೊ.ಸಿ.ಕೆ.ಮಹೇಶ, ಭೀಮಸೇನ ಶ್ರೀನಿವಾಸ, ಜಿಲ್ಲಾ ಸಂಚಾಲಕ ಅಶೋಕ ಚಲವಾದಿ, ಲಕ್ಕಪ್ಪ ಬಡಿಗೇರ, ಮಲ್ಲೇಶಿ ಸಜ್ಜನ, ವಿನಾಯಕ ಗುಣಸಾಗರ, ಗಣೇಶ ಮೇತ್ರಿ, ಕೀರಪ್ಪ ಮಾದರ, ಪರಶುರಾಮ ದಿಂಡವಾರ, ಪ್ರಕಾಶ ಗುಡಿಮನಿ, ರಾಜೀವ ತೊರವಿ, ಲಕ್ಷ್ಮಣ ಹಾಲಿಹಾಳ, ರವಿ ಮ್ಯಾಗೇರಿ, ಶರಣು ಶಿಂಧೆ ಇತರರಿದ್ದರು.