ಕೇಂದ್ರ ಸರ್ಕಾರದಿಂದ ದ್ವೇಷ ರಾಜಕೀಯ

Chaluvarayaswamy
Published on

ಚಿತ್ರದುರ್ಗ: ಬಿಜೆಪಿಯ 26 ಸಂಸದರನ್ನು ರಾಜ್ಯದ ಜನ ಗೆಲ್ಲಿಸಿರುವ ಕಾರಣದಿಂದಲೂ ನರೇಂದ್ರ ಮೋದಿ ಅವರು 2ನೇ ಬಾರಿ ಪ್ರಧಾನಿಯಾಗಿದ್ದಾರೆ. ಆದರೆ, ಕರ್ನಾಟಕದ ಕುರಿತು ಕೇಂದ್ರ ದ್ವೇಷ ರಾಜಕಾರಣ ಮುಂದುವರೆಸಿದೆ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ದೂರಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬರ ಪರಿಹಾರ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಿದ್ದೇವೆ. ಸಚಿವರಾದ ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ ಜೊತೆಗೆ ದೆಹಲಿಗೆ ಹೋದರೂ ಕೇಂದ್ರ ಸಚಿವರು ಭೇಟಿಗೆ ಸಿಗಲಿಲ್ಲ. ಮನವಿಗೂ ಈವರೆಗೂ ಉತ್ತರ ಸಿಕ್ಕಿಲ್ಲ. ಹೀಗಾಗಿ ನ. 23ರಂದು ಕೇಂದ್ರದ ಹಣಕಾಸು ಸಚಿವರನ್ನು ಭೇಟಿಯಾಗಲಿದ್ದೇವೆ ಎಂದರು.

ರಾಜ್ಯದ ಜನರ ಸೌಲಭ್ಯಗಳ ಕುರಿತು ಕೇಂದ್ರ ಸ್ಪಂದಿಸುತ್ತಿಲ್ಲ. ಬರ ಪರಿಹಾರ ಘೋಷಣೆ ಸಂಬಂಧ ಮೂರ‌್ನಾಲ್ಕು ದಿನದೊಳಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೊಡೆತ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಗೆ ತಡೆಯಲು ಸಾಧ್ಯವಿಲ್ಲ. ಇನ್ನೂ ಕಾಂಗ್ರೆಸ್ಸಿಗರನ್ನು ಭಸ್ಮ ಮಾಡುವ ಶಿವ ಶಕ್ತಿ ಪಡೆದಿದ್ದಾರೆಯೇ ಎಂದು ಕಾಂಗ್ರೆಸ್ಸಿಗರು ಬಚ್ಚಾಗಳು ಎಂಬ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದರು.

ಆರ್‌ಎಸ್‌ಎಸ್ ಸಂಘಟನೆ ಬ್ಯಾನ್ ಮಾಡುವ ಕುರಿತು ಎಲ್ಲಿಯೂ ಹೇಳಿಲ್ಲ. ಸಾರ್ವಜನಿಕರಿಗೆ ಹಾನಿ ಉಂಟು ಮಾಡುವ ಸಂಘಟನೆ ವಿರುದ್ಧ ಕ್ರಮ ಅಂತ ಅಷ್ಟೇ ಹೇಳಿದ್ದೇವೆ. ಜನರ ಹಿತದೃಷ್ಟಿಯಿಂದ ದುಡಿಯುವ ಸಂಘ-ಸಂಸ್ಥೆಗಳಿಗೆ ಅಡ್ಡಿಪಡಿಸುವುದಿಲ್ಲ ಎಂದರು.

ಅನ್ಯ ರಾಜ್ಯಗಳಲ್ಲಿ ಚುನಾವಣೆ ಇರುವ ಕಾರಣ ಕಾಂಗ್ರೆಸ್ ವಿರುದ್ಧ ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಸುಳ್ಳು ಆರೋಪಗಳ ಮೂಲಕ ಗಮನ ಬೇರೆಡೆ ಸೆಳೆಯುತ್ತಿದೆ. ಯಾವುದೇ ಪಕ್ಷವಾಗಲಿ ಚುನಾವಣೆ ವೇಳೆ ಮಾತ್ರ ರಾಜಕೀಯ ಮಾಡಬೇಕೆ ಹೊರತು ನಿತ್ಯವೂ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ರಾಜ್ಯ ಸರ್ಕಾರ ಕಲ್ಲಿದ್ದಲು ವಿಚಾರದಲ್ಲಿ ತಪ್ಪು ಮಾಡಿಲ್ಲ. ಒಂದು ವೇಳೆ ಆಗಿದ್ದರೆ, ಸಂಬಂಧಿಸಿದವರ ವಿರುದ್ಧ ಕ್ರಮವಾಗುತ್ತದೆ. ವಿದ್ಯಾನಿಧಿ ಹೊರತು ಪಡಿಸಿ ಉಳಿದ ಗ್ಯಾರಂಟಿ ಯೋಜನೆ ಐದು ವರ್ಷ ನೀಡಲಿದ್ದೇವೆ ಎಂಬುದನ್ನು ಸಿಎಂ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದರು.

ಜಾತಿ ಗಣತಿ ವಿಚಾರದಲ್ಲಿ ಕೆಲವು ಮನೆಗಳಿಗೆ ಭೇಟಿ ನೀಡಿಲ್ಲ ಎಂಬ ಆತಂಕ ಇದೆ. ಸಿಎಂ ಕೂಡ ಸಚಿವ ಸಂಪುಟದಲ್ಲಿ ಈ ಕುರಿತು ಚರ್ಚಿಸಲಿದ್ದಾರೆ. ನಿಗಮ ಮಂಡಳಿ ನೇಮಕಾತಿಯಲ್ಲಿ ಯಾವುದೇ ಅಸಮಾಧಾನವಿಲ್ಲ. ಬಸವರಾಯರೆಡ್ಡಿ ನಮ್ಮ ಪಕ್ಷದಲ್ಲಿ ಹಿರಿಯರಿದ್ದಾರೆ. ಸಚಿವರು ಆಗಬೇಕಾದವರು. ಅವರನ್ನ್ನು ಮುಂದಿನ ದಿನಗಳಲ್ಲಿ ವರಿಷ್ಠರು ಪರಿಗಣಿಸುವ ವಿಶ್ವಾಸವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net